ಇಂದು ʻಅನ್ನಭಾಗ್ಯʼ ಫಲಾನುಭವಿಗಳಿಗೆ ʻಹಣಭಾಗ್ಯʼ; ಅಕೌಂಟ್‌ಗೆ ಬರಲಿದೆ ಹಣ
ಬೆಂಗಳೂರು; ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ತಿಂಗಳಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡೋದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದ್ರೆ ಹೆಚ್ಚುವರಿ ಅಕ್ಕಿ ಸಿಗದ ಕಾರಣ, ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡೋದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಹೀಗಾಗಿ ಇಂದು ಫಲಾನುಭವಿಗಳಿಗೆ ತಲಾ 170ರೂಪಾಯಿಯಂತೆ ಮನೆಯ ಯಜಮಾನನಿಗೆ ಹಣ ವರ್ಗಾವಣೆಯಾಗಲಿದೆ. ಹಣ ವರ್ಗಾವಣೆ ಪ್ರಕ್ರಿಯೆಗೆ ಇಂದು ರಾಜ್ಯ ಸರ್ಕಾರ ಚಾಲನೆ ನೀಡಲಿದೆ.
ರಾಜ್ಯದಲ್ಲಿ ಸುಮಾರು 1.28ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ. ಇದರಲ್ಲಿ ಶೇ.99 ಕಾರ್ಡ್‌ದಾರರ ಆಧಾರ್ ಲಿಂಕ್ ಆಗಿದೆ. ಹೀಗಾಗಿ ಇವರಿಗೆ ಬ್ಯಾಂಕ್ ಖಾತೆಗೆ ಹಣ ಹಾಕಲು ಸುಲಭವಾಗಿದೆ. ಆದ್ರೆ ಉಳಿದ 6 ಲಕ್ಷ ಕಾರ್ಡ್‌ದಾರರು ಆಧಾರ್ ಲಿಂಕ್ ಮಾಡಿಸಿಲ್ಲ, ಜೊತೆಗೆ ಬ್ಯಾಂಕ್ ಅಕೌಂಟ್ ಇಲ್ಲ. ಹೀಗಾಗಿ, ಅವರಿಗೆ ಹಣ ಹಾಕೋದು ಲೇಟ್ ಆಗಬಹುದು. ಉಳಿದ 1.22 ಕೋಟಿ ಕಾರ್ಡ್‌ದಾರರಿಗೆ ಇಂದಿನಿಂದ ಹಂತ ಹಂತವಾಗಿ ಹಣ ವರ್ಗಾವಣೆಯಾಗಲಿದೆ.
ಇಂದು ಕೋಲಾರ ಹಾಗೂ ಮೈಸೂರು ಜಿಲ್ಲೆಯ ಬಿಪಿಎಲ್ ಕಾರ್ಡ್‌ದಾರರ ಅಕೌಂಟ್‌ಗೆ ಹಣ ಜಮೆಯಾಗಲಿದೆ. ಮಂಗಳವಾರ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರ್ಧಾರ ಮಾಡಿದೆ.