ದಿಗಂತ್‌ಗೆ ಮೂರು ಗಂಟೆ ಆಪರೇಷನ್; ಆರೋಗ್ಯದಿಂದಿದ್ದಾರೆಂದ ವೈದ್ಯರು
ಬೆಂಗಳೂರು; ಗೋವಾ ಬೀಚ್‌ನಲ್ಲಿ ಪಲ್ಟಿ ಹೊಡೆಯುವಾಗ ಕುತ್ತಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಿನ್ನೆ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅಬ್ಸರ್ವೇಷನ್‌ನಲ್ಲಿ ಇಡಲಾಗಿದೆ. ಶೀಘ್ರದಲ್ಲೇ ನಟ ದಿಗಂತ ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪತ್ನಿ ಐಂದ್ರಿತಾ ಜೊತೆ ಗೋವಾಗೆ ತೆರಳಿದ್ದ ದಿಗಂತ್, ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಈ ವೇಳೆ ಪಲ್ಟಿ ಹೊಡೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಮೊನ್ನೆ ಈ ಘಟನೆ ನಡೆದಿದ್ದು, ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅನಂತರ ಏರ್‌ಲಿಫ್ಟ್ ಮೂಲಕ ನಟ ದಿಗಂತ್‌ರನ್ನು ಬೆಂಗಳೂರಿಗೆ ಕರೆತರಲಾಗಿತ್ತು.
ಇದೀಗ ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ದಿಗಂತ್ ಅವರಿಗೆ ಸೂಕ್ತ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅವರೀಗ ಆರೋಗ್ಯದಿಂದ ಇದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ದಿಗಂತ್ ಐಸಿಯುನಲ್ಲಿ ಇರುವಂತಹ ಫೋಟೋವೊಂದನ್ನು ಬಿಡುಗಡೆ ಮಾಡಲಾಗಿದ್ದು, ಅದ್ರಲ್ಲಿ ದಿಗಂತ್ ಗೆಲುವಿನ ಚಿಹ್ನೆ ತೋರಿಸಿ, ತಾವು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ.