ರೈತರ ಪರಿಹಾರಕ್ಕೆ ದುಡ್ಡಿಲ್ಲ, ಚೇಲಾಗಳಿಗೆ ಬಿರಿಯಾನಿ ಊಟಕ್ಕೆ 150 ಕೋಟಿ ರೂ. ಇದೆ; ಆರ್.ಅಶೋಕ ಆಕ್ರೋಶ
ಬೆಂಗಳೂರು; ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್‌ನ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ಮಾತ್ರ 150 ಕೋಟಿ ರೂ. ಇದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವಾಗಿ ಕಾಂಗ್ರೆಸ್ ಸರ್ಕಾರ 100 ಕೋಟಿ ರೂ.ಬಿಡುಗಡೆಗೊಳಿಸುತ್ತಿದೆ. ನ್ಯಾಯವಾಗಿ 3-4 ಸಾವಿರ ಕೋಟಿ ರೂ. ನೀಡಬೇಕಿತ್ತು. ಈಗ ಗ್ಯಾರಂಟಿ ಜಾರಿ ಸಮಿತಿಯ 3 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ 25 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಅಂದರೆ ಐದು ವರ್ಷಕ್ಕೆ 150 ಕೋಟಿ ರೂ. ಆಗಲಿದೆ. ಕಾಂಗ್ರೆಸ್ ಚೇಲಾಗಳಿಗೆ ಮಜಾ ಮಾಡಲು ಇಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ. ಸರ್ಕಾರ ರೈತರಿಗೆ ಯಾವಾಗ ಕ್ಯಾಬಿನೆಟ್ ದರ್ಜೆಯ ಗೌರವ ಕೊಟ್ಟು ಪರಿಹಾರ ನೀಡಲಿದೆ ಎಂದು ಪ್ರಶ್ನಿಸಿದರು.
ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾರ್ಯಕರ್ತರಿಗೆ ಬಿರಿಯಾನಿ, ಮಟನ್ ಊಟ ಹಾಕಲು ಹಣವಿದೆ. ಇದೇ ಹಣವನ್ನು ಶಾಲೆಗಳಿಗೆ ಕೊಡಬಹುದು. ಗ್ಯಾರಂಟಿ ನಿರ್ವಹಣೆಗೆ ಬೇಕಿದ್ದರೆ ಅಧಿಕಾರಿಗಳನ್ನು ಬಳಸಿಕೊಳ್ಳಲಿ. ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ತಂತ್ರಾಂಶ ಕೆಲಸ ಮಾಡುತ್ತಿಲ್ಲ. ಇದರ ಬಗ್ಗೆ ಗಮನಹರಿಸಲಿ ಎಂದರು.
ಕಾಂಗ್ರೆಸ್‌ನವರ ದುರ್ಬುದ್ಧಿ ಹಿಂದೆಯೇ ಕಂಡಿದ್ದೇವೆ. ರಾಮಾಯಣ ಕಾಲ್ಪನಿಕ, ರಾಮನೇ ಇಲ್ಲ ಎಂದು ಅವರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಲಕ್ಷಾಂತರ ದಾಖಲೆಗಳು ಸಿಗುತ್ತದೆ. ಆದರೂ ರಾಮನ ಜನ್ಮ ಪ್ರಮಾಣಪತ್ರವನ್ನು ಕೇಳಿ ಪಾಪ ಕಟ್ಟಿಕೊಂಡ ಕಾಂಗ್ರೆಸ್ ನಾಯಕರು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬರದೇ ಇರುವುದು ಲೇಸು. ಲಾಲ್‌ಕೃಷ್ಣ ಅಡ್ವಾಣಿಯವರು ಮಂದಿರ ಕಟ್ಟಲು ಹೋರಾಟ ನಡೆಸಿದಾಗ ಅವರನ್ನು ಕಾಂಗ್ರೆಸ್ ನಾಯಕರು ಹಾಗೂ ಲಾಲೂ ಪ್ರಸಾದ್ ಯಾದವ್ ಜೈಲಿಗೆ ಕಳುಹಿಸಿದ್ದರು. ಆಗ ಜೈಲಿಗೆ ಕಳಿಸಿ ಈಗ ಅವರ ಪರ ಮಾತನಾಡುವ ಈ ನಾಯಕರಿಗೆ ಎರಡು ನಾಲಿಗೆ ಇದೆಯೇ ಎಂದು ಪ್ರಶ್ನೆ ಮಾಡಿದರು.