Bengaluru

ಕೊರೊನಾ ನಾಲ್ಕನೇ ಅಲೆ ಹಿನ್ನೆಲೆ; ಇಂದಿನಿಂದಲೇ ಮಾಸ್ಕ್‌ ಕಡ್ಡಾಯ – ಡಾ.ಕೆ.ಸುಧಾಕರ್‌

ಬೆಂಗಳೂರು; ಕೆಲವೇ ವಾರಗಳಲ್ಲಿ ಕೊರೊನಾ ನಾಲ್ಕನೇ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ಮುಂದೆ ಮಾಸ್ಕ್‌ ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ ನಂತರ ಮಾತನಾಡಿದ ಅವರು, ಮಾಸ್ಕ್‌ ಕಡ್ಡಾಯ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೊರೊನಾ ನಾಲ್ಕನೇ ಬರುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತಿದೆ. ಇದರಲ್ಲಿ ಪ್ರಮುಖವಾದುದು ಮಾಸ್ಕ್‌. ಮಾಸ್ಕ್‌ ಧರಿಸದೇ ಹೋದರೆ ಮೊದಲು ದಂಡ ವಿಧಿಸಲಾಗುತ್ತಿತ್ತು. ಆದ್ರೆ ಈಗ ಕಡ್ಡಾಯ ಮಾಡಿದರು, ಮಾಸ್ಕ್‌ ಹಾಕದಿದ್ದರೆ ದಂಡ ವಿಧಿಸುವುದಿಲ್ಲ. ಆದ್ರೆ ಎಚ್ಚರಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಕೆಲ ದಿನಗಳಿಂದ ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಲಸಿಕೆ ತೆಗೆದುಕೊಳ್ಳದವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ, ಜಾಗೃತಿ ವಹಿಸಿ ಎಂದು  ಹೇಳಿದರು.

ದಕ್ಷಿಣ ಕೊರಿಯಾ, ಥಾಯ್ಲೆಂಡ್​, ಜಪಾನ್​ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ಇರಿಸಬೇಕು, ಏರ್​​ಪೋರ್ಟ್​ಗಳಲ್ಲಿ ನಿಗಾ ಇಡಲು ನಿರ್ಧರಿಸಲಾಗಿದೆ. ಬಿಬಿಎಂಪಿಗೂ ವಿದೇಶಿ ಪ್ರವಾಸ ಹಿನ್ನೆಲೆಯವರ ಮೇಲೆ ನಿಗಾ ಇಡಲು ಸೂಚನೆ ನೀಡಲು ನಿರ್ಧರಿಸಲಾಗಿದೆ. ಲ್ಯಾಬ್ ವರದಿ ಬರುವವರಗೆ ರಾಜ್ಯದಲ್ಲಿ ಯಾವ ತಳಿ ಇದೆ ಅಂತ ಹೇಳೋದಿಕ್ಕೆ ಆಗಲ್ಲ‌. ಸದ್ಯ ಲ್ಯಾಬ್ ನವರು ಜಿನೋಮಿಕ್ ಸೀಕ್ವೆನ್ಸ್​​ಗೆ ಮಾದರಿ ಪಡೆದಿದ್ದಾರೆ ಅದರ ವರದಿ ಬರಲಿದೆ. ಒಮಿಕ್ರಾನ್​ನ ತಳಿಯೇ ಆದರೆ, ರೋಗ ಲಕ್ಷಣಗಳು ಒಂದೇ ಇರುತ್ತವೆ. ವರದಿ ಬರುವವರೆಗೂ ಕಾದು ನೋಡಬೇಕು ಎಂದರು.

ದೆಹಲಿ, ಮಹಾರಾಷ್ಟ್ರ, ಕೇರಳ, ತಮಿಳುನಾಡುಗಳಿಂದ ಬರುವವರ ವಿಚಾರದ ಬಗ್ಗೆ ಏಪ್ರಿಲ್ 27 ರ ಬಳಿಕ‌ ಸಭೆ ನಡೆಸಲಾಗುತ್ತದೆ. ಪ್ರಧಾನಿ ಸಭೆ ಬಳಿಕ ಮತ್ತೊಂದು ಸಭೆ ಸೇರುತ್ತೇವೆ. ಪ್ರಧಾನಿಯವರು ನೀಡುವ ನಿರ್ದೇಶನಗಳನ್ನು ನೋಡಿಕೊಂಡು ಮುಂದುವರೆಯುತ್ತೇವೆ. ಆ ರಾಜ್ಯಗಳಿಂದ ಬರುವವರ ಮೇಲೆ ಯಾವ ರೀತಿ‌‌ ನಿಗಾ ಇಡಬೇಕೆಂದು ಆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

 

Share Post