ಜೆಟ್‌ಲ್ಯಾಗ್ ಪಬ್ ಪ್ರಕರಣ; ಪೊಲೀಸ್ ಠಾಣೆಗೆ ನಟ ದರ್ಶನ್, ಇತರರು ಹಾಜರು
ಬೆಂಗಳೂರು; ಇತ್ತೀಚೆಗೆ ರಾಜಾಜಿನಗರದ ಜೆಟ್‌ಲ್ಯಾಗ್ ಪಬ್‌ನಲ್ಲಿ ಕಾಟೇರ ಚಿತ್ರತಂಡ ಬೆಳಗಿನಜಾವದವರೆಗೂ ಸಕ್ಸಸ್ ಪಾರ್ಟಿ ಮಾಡಿತ್ತು. ಈ ಸಂಬಂಧ ಸುಬ್ರಹ್ಮಣ್ಯ ನಗರ ಪೊಲೀಸರು ದರ್ಶನ್, ರಾಕ್‌ಲೈನ್ ವೆಂಕಟೇಶ್ ಸೇರಿ ಹಲವು ಸೆಲ್ರಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಇಂದು ಈ ಸೆಲೆಬ್ರಿಟಿಗಳು ಸುಬ್ರಹ್ನಣ್ಯ ನಗರ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಕ್ಸಸ್ ಸೆಲೆಬ್ರೇಷನ್ ಮಾಡಲಾಗಿತ್ತು. ಅನಂತರ ನಟರಾದ ದರ್ಶನ್, ಧನಂಜಯ್, ಅಭಿಷೇಕ್ ಅಂಬರೀಷ್ ಸೇರಿ ಹಲವು ಚಿತ್ರರಂಗದ ಪ್ರಮುಖರು ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ನಿಯಮದ ಪ್ರಕಾರ ಮಧ್ಯರಾತ್ರಿ ಒಂದು ಗಂಟೆಯ ನಂತರ ಪಬ್ ಓಪನ್ ಮಾಡಬಾರದು. ಆದ್ರೆ ನಿಯಮಗಳನ್ನು ಗಾಳಿಗೆ ತೂರಿ ನಟರಿಗಾಗಿ ಪಬ್ ಓಪನ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ನೋಟಿಸ್ ನೀಡಲಾಗಿತ್ತು.
ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ಹರಿಕೃಷ್ಣ, ಅಭಿಷೇಕ್ ಅಂಬರೀಷ್, ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಪಾರ್ಟಿಯಲ್ಲಿದ್ದರು. ಹೀಗಾಗಿ ಇವರೆಲ್ಲರಿಗೂ ನೋಟಿಸ್ ನೀಡಲಾಗಿತ್ತು. ಇಂದು ನಟ ದರ್ಶನ್, ಅಭಿಷೇಕ್ ಅಂಬರೀಸ್, ಡಾಲಿ ಧನಂಜಯ್, ನೀನಾಸಂ ಸತೀಶ್, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.