ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ; ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು; ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ನಮ್ಮ ಯುವ ಸಮೂಹದ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ನಡೆದಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತದ ಸಂವಿಧಾನ ಪೀಠಿಕೆ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಗುರಿ ಯುವ ಸಮುದಾಯದ ಸಬಲೀಕರಣಕ್ಕೆ ಸಂಕಲ್ಪ ಮಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾನು ಪಕ್ಷದ ಜವಾಬ್ದಾರಿ ವಹಿಸಿಕೊಂಡ ನಂತರ ಪ್ರತಿಜ್ಞಾ ಕಾರ್ಯಕ್ರಮ ಮಾಡಲಾಗಿತ್ತು. ಈಗಿನ ಮತ್ತು ಭವಿಷ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವ ಸಮುದಾಯ ಹಾಗೂ ಮಕ್ಕಳ ಪಾತ್ರದ ಬಗ್ಗೆ ನಾವೆಲ್ಲ ಯೋಜಿಸಬೇಕಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅವರನ್ನು ಒಳಗೊಳ್ಳುವ ಬಗ್ಗೆ ಗಮನ ಹರಿಸಬೇಕಿದೆ. ಸುಶಿಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವ ದೇಶದ ಬಹುದೊಡ್ಡ ಆಸ್ತಿ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಅವರಿಗೆ, ಅವರ ಧ್ವನಿಗೆ ಮಹತ್ವ ನೀಡಬೇಕಿದೆ. ಇದಕ್ಕೆ ಮೊದಲು ಶಿಕ್ಷಣದ ಮೂಲಕ ಅವರನ್ನು ಬಲಿಷ್ಠ ಶಕ್ತಿಯಾಗಿ ಬೆಳೆಸಬೇಕಿದೆ. ಇದೆ ಪ್ರಜಾಪ್ರಭುತ್ವ ದಿನದ ಸಂಕಲ್ಪವಾಗಬೇಕಿದೆ. ಸುರಕ್ಷಿತ ಯುವಸಮುದಾಯ ಈ ದೇಶದ ದೊಡ್ಡ ಆಸ್ತಿ. ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ನೈತಿಕ ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು. ಇದೇ ಈ ಪ್ರಜಾಪ್ರಭುತ್ವ ದಿನದ ನಮ್ಮ ಸಂಕಲ್ಪ ಎಂದರು.
ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಗಳಷ್ಟೇ ಮುಖ್ಯವಾಗಿ ನಾವು ಸಂವಿಧಾನವನ್ನು ಗೌರವಿಸಿ, ಆರಾಧಿಸಿ, ರಕ್ಷಣೆ ಮಾಡಬೇಕು. “Constitution is not a mere lawyers document, It is a vehicle of life and its spirits is always the spirit of age” ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಅಂದರೆ, ಸಂವಿಧಾನ ಕೇವಲ ವಕೀಲರ ದಾಖಲೆಗಳ ಪುಸ್ತಕವಲ್ಲ. ಇದು ಜೀವನದ ಯಂತ್ರ ಹಾಗೂ ಸ್ಫೂರ್ತಿಯಾಗಿದೆ. ಈ ಸ್ಫೂರ್ತಿ ಯುಗಗಳವರೆಗೆ ಸಾಗಲಿದೆ ಎಂದರ್ಥ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮಗೆ ಇಂತಹ ಶ್ರೇಷ್ಠ ಸಂವಿಧಾನ ದೊರೆತಿರುವುದು ಪುಣ್ಯ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಸರ್ವೇಜನ ಸುಖಿನೋ ಭವಂತು, ಮಾನವ ಜಾತಿ ತಾನೊಂದೆ ವಲಂ ಎಂದು ಸಂವಿಧಾನ ಹೇಳುತ್ತದೆ. ವಿಶ್ವದಲ್ಲೇ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವ ಇರುವುದರಿಂದಲೇ ಈ ರೀತಿ ಸರ್ಕಾರಗಳು ನಿಮ್ಮ ಸೇವೆಗೆ ನಿಂತಿವೆ. ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಸರ್ವರಿಗೂ ಸಮಪಾಲು- ಸಮಬಾಳು ಸಮಾಜವನ್ನು ಕಟ್ಟಲು ಸಾಧ್ಯ ಎಂದರು.