ಸಂವಿಧಾನ ವಿರೋಧ ಮಾಡುವವರ ಬಗ್ಗೆ ಜಾಗೃತರಾಗುವುದು ಅಗತ್ಯ; ಸಿಎಂ ಸಿದ್ದರಾಮಯ್ಯ
ಬೆಂಗಳೂರು; ಸಂವಿಧಾನ ವಿರೋಧ ಮಾಡುವವರ ಬಗ್ಗೆ ಜಾಗೃತರಾಗುವುದು ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಅಂತಾರಾಷ್ಟ್ರೀಯ ಸಂವಿಧಾನದ ದಿನ. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಮುಂಭಾಗ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಂವಿಧಾನ ಪೀಠಿಕೆ ಓದಿದ ಬಳಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸಿಂಧೂನದಿಯ ನಾಗರಿಕತೆಯ ಕಾಲದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಬುದ್ಧ, ಬಸವಣ್ಣನವರ ಅವಧಿಯಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲಾಗಿತ್ತು. ಅನಂತರ ಸಂವಿಧಾನ ರಚನೆ ಬಳಿಕ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬಂದಿದೆ. ಪ್ರಜಾಪ್ರಭತ್ವ ವ್ಯವಸ್ಥೆಯಿಂದ ಎಲ್ಲಾ ವರ್ಗದ ಜನಕ್ಕೂ ಅಧಿಕಾರ, ಇತರೆ ಎಲ್ಲಾ ಸೌಲಭ್ಯಗಳೂ ಸಿಗುತ್ತಿವೆ. ಹೀಗಾಗಿ ಎಲ್ಲರೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಶಾಲಾ ಮಕ್ಕಳು ಸೇರಿದಂತೆ ಎಲ್ಲರೂ ಸಂವಿಧಾನದ ಪೀಠಿಕೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಕೆ.ಹೆಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಶಿವರಾಜ್ ತಂಗಡಗಿ, ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.