ಟಿಕೆಟ್ ಸಿಗದಿದ್ದಕ್ಕೆ ದತ್ತಾ ಅಸಮಧಾನ; ಭಾನುವಾರ ಬೆಂಬಲಿಗರ ಸಭೆ
ಚಿಕ್ಕಮಗಳೂರು; ಹಿರಿಯ ನಾಯಕ ವೈಎಸ್‌ವಿ ದತ್ತಾ ಅವರು ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕಡೂರು ಕ್ಷೇತ್ರದಿಂದ ಅವರು ಟಿಕೆಟ್ ಬಯಸಿದ್ದರು. ಆದ್ರೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ದತ್ತಾ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ದತ್ತಾ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಬಲಿಗರೆಲ್ಲಾ ಏನು ಹೇಳ್ತಾರೋ ಆ ತೀರ್ಮಾನ ಕೈಗೊಳ್ಳಲು ವೈಎಸ್‌ವಿ ದತ್ತಾ ಹೇಳಿದ್ದಾರೆ.
ದತ್ತಾ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಮಂತ್ರಿಯಾಗೋ ಕನಸು ಕಾಣುತ್ತಿದ್ದರು. ಕೊನೆಯ ಕ್ಷಣದ ತನಕ ದತ್ತಾ ಅವರಿಗೆ ಕಡೂರು ಟಿಕೆಟ್ ಸಿಗುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ ಕೊನೇ ಕ್ಷಣದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅಂದಹಾಗೆ, ಇತ್ತೀಚೆಗೆ ದತ್ತಾ ಅವರ ಆಡಿಯೋ ಒಂದು ವೈರಲ್ ಆಗಿತ್ತು. ಈ ಕಾರಣದಿಂದಾಗಿಯೇ ಟಿಕೆಟ್ ತಪ್ಪಿದೆ ಎಂದು ಹೇಳಲಾಗುತ್ತಿದೆ.
ಇನ್ನು ಟಿಕೆಟ್ ಕೈತಪ್ಪುತ್ತಿದ್ದಂತೆ ಅವರ ಬೆಂಬಲಿಗರು ಅವರ ಮನೆ ಮುಂದೆ ಸೇರಿದ್ದರು. ಪಕ್ಷೇತರವಾಗಿ ನಿಲ್ಲುವಂತೆ ಪಟ್ಟು ಹಿಡಿದಿದ್ದರು. ಈ ನಡುವೆ ಜೆಡಿಎಸ್ ಕೂಡಾ ವಾಪಸ್ ಪಕ್ಷಕ್ಕೆ ಬರುವಂತೆ ಕರೆಯುತ್ತಿದೆ. ಈ ಹಿನ್ನೆಲೆಯಲ್ಲಿ ದತ್ತಾ ಅವರು ಭಾನುವಾರ ಸಭೆ ಕರೆದಿದ್ದಾರೆ. ಇದೇ ವೇಳೆ ದತ್ತಾ ಅವರು, ನನಗೆ ಟಿಕೆಟ್ ಕೈತಪ್ಪಿದ್ದಕ್ಕೆ ಬೇಜಾರಿಲ್ಲ. ಆದ್ರೆ ಟಿಕೆಟ್ ಕೈತಪ್ಪಿದ ಮೇಲೆ ಯಾರಾದರೂ ನಾಯಕರು ನನಗೆ ಕರೆ ಮಾಡಿ ಸಮಾಧಾನ ಮಾಡಬಹುದಿತ್ತು. ಕಾರಣ ಹೇಳಬಹುದಿತ್ತು. ಆದ್ರೆ ಎಲ್ಲರೂ ನಿರ್ಲಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಬೇಜಾಗಿದೆ ಎಂದು ದತ್ತಾ ಹೇಳಿದ್ದಾರೆ ಎನ್ನಲಾಗಿದೆ.