ಬಡವರ ಮೇಲೆ ತೆರಿಗೆಯ ಭಾರ: ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು : ಜನಸಾಮಾನ್ಯರ ಮೇಲಿನ ತೆರಿಗೆಯ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ರಾಜರ ಕಾಲದಲ್ಲಿ ತೆರಿಗೆ ಭೂ ಕಂದಾಯದ ರೂಪದಲ್ಲಿ ಬರುತ್ತಿತ್ತು. ಶ್ರೀಮಂತರು ಮಾತ್ರ ತೆರಿಗೆ ಕೊಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅನೇಕ ಆರ್ಥಿಕ ತಜ್ಞರು ಈ ಹಿಂದೆ ಪ್ರತಿಪಾದಿಸಿದ್ದರು. ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಅದನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸಬೇಕು ಎಂಬುದು ಅವರ ನಿಲುವು. ಇದು ಕಲ್ಯಾಣ ರಾಷ್ಟ್ರದ ಮೂಲ ತತ್ವವೂ ಆಗಿತ್ತು.
ನಮ್ಮಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ದುಂಬಿ ಮಕರಂದವನ್ನು ಹೀರಿದಂತೆ, ಹಾಲು ಕರೆಯುವಾಗ ಕುರುವಿಗೂ ಸ್ವಲ್ಪ ಮೀಸಲಿಡುವಂತೆ ತೆರಿಗೆ ವಿಧಿಸಬೇಕು. ಇದರ ಅರ್ಥ ಬಡವರ ಹಿತೃದಷ್ಠಿಯನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ವಿಧಿಸಬೇಕು ಎಂಬುದಾಗಿತ್ತು. ಆದರೆ, ಇತ್ತೀಚೆಗೆ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರ ಮೇಲಿನ ತೆರಿಗೆಯ ಹೊರೆ ಹೆಚ್ಚಾಗುತ್ತಿದೆ.
ಕಾರ್ಪೊರೇಟ್ ಕಂಪನಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ.75 ಹಾಗೂ ಜನ ಸಾಮಾನರ ಮೇಲಿನ ತೆರಿಗೆ ದರ ಶೇ.25 ಇತ್ತು. ಈಗ ಇದು ಅದಲು ಬದಲಾಗುತ್ತಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಬಜೆಟ್ ಅತ್ಯಂತ ಪ್ರಮುಖವಾದದ್ದು. ಕಾಯಕ ಮತ್ತು ದಾಸೋಹ ಇದರ ಅರ್ಥ. ಅಂದರೆ, ಉತ್ಪಾದನೆ ಮತ್ತು ಹಂಚಿಕೆ. ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೀಗೆ ವ್ಯಾಖ್ಯಾನಿಸಿದ್ದರು. ಬಜೆಟ್‌ನಲ್ಲಿನ ಅಂಕಿ-ಅಂಶಗಳು ಅಲಂಕಾರಿಕ ಹಾಗೂ ಪದಗಳ ಪ್ರಯೋಗ ಆಕರ್ಷವಾಗಿದ್ದರೆ ಸಾಲದು. ಮುಂಗಡ ಪತ್ರ ವಾಸ್ತವಿಕತೆಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದಿದ್ದರು ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ ಎಂದು ಉದಾಹರಣೆ ಸಹಿತ ವಿವರಸಿದ್ದಾರೆ.