ತುಮಕೂರಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನ; ಸಂಜೆ ದೆಹಲಿಗೆ ಪ್ರಯಾಣ
ಬೆಂಗಳೂರು; ಕೆಲ ದಿನಗಳ ಹಿಂದೆ ಮಾಜಿ ಸಚಿವ ವಿ.ಸೋಮಣ್ಣ ಅವರು ಡಿಸೆಂಬರ್ ಆರರ ನಂತರ ನನ್ನ ನಿಲುವು ಪ್ರಕಟಿಸುತ್ತೇನೆ ಎಂದು ಹೇಳಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದ್ದರು. ಇಂದು ಡಿಸೆಂಬರ್ 6. ಜೊತೆಗೆ ಸೋಮಣ್ಣ ಅವರ ಶಕ್ತಿಪ್ರದರ್ಶನ ಕಾರ್ಯಕ್ರಮ ಎಂದೇ ಭಾವಿಸಲಾದ ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಪಾಲ್ಗೊಂಡಿದ್ದಾರೆ. ಇದರಲ್ಲಿ ಗೃಹಸಚಿವ ಪರಮೇಶ್ವರ್ ಹಾಗೂ ಸಚಿವ ಕೆ.ಎನ್.ರಾಜಣ್ಣ ಕೂಡಾ ಹಾಜರಿದ್ದಾರೆ. ಹೀಗಾಗಿ ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆಂದೇ ಮೊದಲಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ಕಾರ್ಯಕ್ರಮ ಸಾಕಷ್ಟು ಮಹತ್ವದ್ದೆನಿಸಿದೆ. ಕಾರ್ಯಕ್ರಮದಲ್ಲಿ ಸೋಮಣ್ಣ ಏನಾದರೂ ಹೇಳಿಕೆ ನೀಡುತ್ತಾರಾ ಅಥವಾ ಕಾರ್ಯಕ್ರಮದ ಬಳಿಕ ನಿರ್ಧಾರ ಪ್ರಕಟಿಸುತ್ತಾರಾ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.
ಇನ್ನೊಂದೆಡೆ ಕಾರ್ಯಕ್ರಮದ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸೋಮಣ್ಣ ಜೊತೆಗೆ ಅರವಿಂದ ಬೆಲ್ಲದ್ ಹಾಗೂ ರಮೇಶ್ ಜಾರಕಿಹೊಳಿ ಕೂಡಾ ದೆಹಲಿಗೆ ಹೋಗಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಸೋಮಣ್ಣ ಅಸಾಮಧಾನಗೊಂಡಿದ್ದಾರೆ. ಇದನ್ನು ಬಹಿರಂಗವಾಗಿಯೂ ಮಾತನಾಡಿದ್ದಾರೆ. ಈ ಕಾರಣದಿಂದ ಹೈಕಮಾಂಡ್ ನಾಯಕರು ಸೋಮಣ್ಣರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅಸಮಾಧಾನಿತ ನಾಯಕರೇ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ದೂರು ಹೇಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ ಸಿದ್ದಗಂಗಾ ಮಠದಲ್ಲಿ ಯತಿವರ್ಯರ ವಾಸ್ತವ್ಯ ಹಾಗೂ ಪೂಜಾ ಕೈಂಕರ್ಯಕ್ಕೆ ಅನುಕೂಲವಾಗುವ ಸಲುವಾಗಿ ಮಾಜಿ ಸಚಿವ ವಿ.ಸೋಮಣ್ಣ ಪ್ರತಿಷ್ಠಾನದಿಂದ ಗುರುಭವನ ನಿರ್ಮಾಣ ಮಾಡಲಾಗಿದೆ. ಈ ಭವನ ಲೋಕಾರ್ಪಣೆ ಕಾರ್ಯಕ್ರಮ ಇಂದು ಸಿದ್ದಗಂಗಾ ಮಠದಲ್ಲಿ ನಡೆಯುತ್ತಿದೆ.