BengaluruPolitics

ಸಿದ್ದರಾಮಯ್ಯರ ಡ್ಯಾಮೇಜ್‌ ಸ್ಟೇಟ್‌ಮೆಂಟ್ಸ್‌ನಿಂದ ಕಾಂಗ್ರೆಸ್‌ಗೆ ಕಸಿವಿಸಿ..!

ಬೆಂಗಳೂರು; ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಿಎಂ ಬೊಮ್ಮಾಯಿಯವರನ್ನು ನಾಯಿ ಮರಿಗೆ ಹೋಲಿಸಿದ್ದರು. ಬಸವರಾಜ ಬೊಮ್ಮಾಯಿಯವರು ಪ್ರಧಾನಿ ಮೋದಿ ಮುಂದೆ ನಾಯಿ ಮರಿ ಇದ್ದಂತೆ ಎಂಬಂತೆ ಮಾತನಾಡಿದ್ದರು. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಇದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ವಲ್ಪ ಸಾಫ್ಟಾಗೇ ಮಾತನಾಡಿದ್ದರೂ, ಇತರ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ. ಚುನಾವಣೆ ಹತ್ತಿರಕ್ಕೆ ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡುವ ಇಂತಹ ಹೇಳಿಕೆಗಳು ಕಾಂಗ್ರೆಸ್‌ ಪಕ್ಷಕ್ಕೆ ಕಸಿವಿಸಿ ತಂದೊಡ್ಡುತ್ತವೆ. ಈ ಹಿಂದೆ ಕೂಡಾ ಸಿದ್ದರಾಮಯ್ಯ ಇಂತಹ ಡ್ಯಾಮೇಜ್‌ ಸ್ಟೇಟ್‌ಮೆಂಟ್‌ಗಳನ್ನು ನೀಡಿ, ಪಕ್ಷಕ್ಕೆ ನಷ್ಟ ತೊಂದೊಡ್ಡಿದ್ದರು. ಈ ಬಾರಿಯೂ ಸಿದ್ದರಾಮಯ್ಯರ ಇಂತಹ ಹೇಳಿಕೆಗೆ ಕಾಂಗ್ರೆಸ್‌ಗೆ ಮುಜುಗರ ತಂದೊಡ್ಡುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಮಟ್ಟಕ್ಕೆ ಹೋಗಲು ಸಿದ್ದರಾಮಯ್ಯ ಅವರ ಹೇಳಿಕೆಯೇ ಕಾರಣ ಎಂದು ಕೆಲವರು ಹೇಳುತ್ತಾರೆ. ಅಂದಹಾಗೆ, 2013ರಲ್ಲಿ ಸಿದ್ದರಾಮಯ್ಯ ನರೇಂದ್ರ ಮೋದಿಯವರನ್ನು ನರಹಂತಕ ಎಂದು ಹೇಳಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿತ್ತು. ಈ ವಿಚಾರವನ್ನು ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಅಸ್ತ್ರವಾಗಿ ಉಪಯೋಗಿಸಿಕೊಳ್ತು. ಇದ್ರಿಂದಾಗಿ ಆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರಿ ನಷ್ಟವುಂಟಾಯ್ತು.

ಇನ್ನು 2018ರಲ್ಲಿ ಸಿದ್ದರಾಮಯ್ಯ ಅವರು ಎಲ್ಲಿ ಹೋದರೂ ಕುಮಾರಸ್ವಾಮಿ ವಿರುದ್ಧ ಗುಡುಗುತ್ತಿದ್ದರು. ಅವರಪ್ಪರಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನೇ ಹೆಚ್ಡಿಕೆ ಹಾಗೂ ದೇವೇಗೌಡರು ಅಸ್ತ್ರವಾಗಿ ಬಳಸಿಕೊಂಡರು. ಚುನಾವಣಾ ಪ್ರಚಾರ ಸಭೆಗಳಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ದೇವೇಗೌಡರು ಹಾಗೂ ಹೆಚ್ಡಿಕೆ ಅವರು ಎಮೋಷನಲ್‌ ಭಾಷಣಗಳನ್ನು ಮಾಡಿದ್ದರು. ಇದು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಲಾಭ ತಂದುಕೊಟ್ಟಿತ್ತು. ಇದ್ರಿಂದಾಗಿ ಕಾಂಗ್ರೆಸ್‌ಗೆ ಹೊಡೆತ ಬಿತ್ತು. ಅಷ್ಟೇ ಅಲ್ಲದೇ ಅವರಪ್ಪರಾಣೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ ಅವರೇ ಹೆಚ್ಡಿಕೆ ಮನೆಗೆ ಹೋಗಿ ನೀವೇ ಸಿಎಂ ಆಗಿ ಎಂದು ಕೇಳಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಡಿಕೆ ಎರಡನೇ ಬಾರಿ ಸಿಎಂ ಆಗುವಂತಾಯ್ತು.

ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಯಿ ಮರಿಗೆ ಹೋಲಿಸಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಜನವರಿ 3ರಂದು ಈ ಹೇಳಿಕೆ ನೀಡಿದ ಮೇಲೆ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಬಗ್ಗೆ ಅವರು ಸಮರ್ಥನೆಗಿಳಿಸಿದರೂ ಯಾರೂ ಅದನ್ನು ಸಹಿಸುತ್ತಿಲ್ಲ. ಬಿಜೆಪಿ ನಾಯಕರು ಎಲ್ಲರೂ ಒಗ್ಗಟ್ಟಾಗಿ ಸಿದ್ದರಾಮಯ್ಯ ವಿರುದ್ಧ ಮುಗಿ ಬಿದ್ದಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಸಿದ್ದರಾಮಯ್ಯ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸಿದ್ದರಾಮಯ್ಯರ ಈ ಹೇಳಿಕೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಸ್ತ್ರವಾಗಬಹುದು.

ಸಿದ್ದರಾಮಯ್ಯ ಅವರು ನೇರವಾಗಿ ಮಾತನಾಡುತ್ತಾರೆ. ಇದು ಒಮ್ಮೊಮ್ಮೆ ವಿವಾದಕ್ಕೆ ಕಾರಣವಾಗುತ್ತದೆ. ಇದ್ರಿಂದ ಪಕ್ಷಕ್ಕೆ ನಷ್ಟವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಈ ಬಗ್ಗೆ ಎಚ್ಚರದಿಂದಿರುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share Post