ಸಿದ್ದರಾಮಯ್ಯಗೆ ಕ್ಷೇತ್ರ ಆಯ್ಕೆಯೇ ಕಗ್ಗಂಟು; ಕೋಲಾರದಲ್ಲಿ ಗೆಲ್ಲೋಕೆ ಆಗುತ್ತಾ..?
ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇತ್ತ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಆದ್ರೆ, ಮಾಜಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಆಯ್ಕೆಯೇ ಸಮಸ್ಯೆ ಆಗಿದೆ. ಬದಾಮಿಯಲ್ಲಿ ನಿಲ್ಲುವುದು ಬೇಡ ಎಂದು ನಿರ್ಧರಿಸಿರುವ ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಗೆ ಕರಸತ್ತು ನಡೆಸುತ್ತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದ್ರೆ, ಅಲ್ಲೂ ಕೂಡಾ ಗೆಲ್ಲೋದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಆಯ್ಕೆಯದ್ದೇ ದೊಡ್ಡ ಸಮಸ್ಯೆಯಾಗಿದೆ.
ಕೋಲಾರ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರ ಸೋಲಿಗೆ ಶಾಸಕ ರಮೇಶ್ ಕುಮಾರ್ ಕಾರಣರಾಗಿದ್ದರು. ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದಲೇ ನನ್ನ ಸೋಲಾಯಿತು ಎಂದು ಕೆ.ಎಚ್.ಮುನಿಯಪ್ಪ ಕೂಡಾ ಅಲ್ಲಲ್ಲಿ ಹೇಳಿಕೊಂಡಿದ್ದರು. ಇದೀಗ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರೆ, ಕೆ.ಎಚ್.ಮುನಿಯಪ್ಪ ಅವರು ಸಿದ್ದರಾಮಯ್ಯ ಅವರಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೊತೆಯಲ್ಲೇ ಇದ್ದುಕೊಂಡು ಬೇರೆ ಪಕ್ಷಕ್ಕೆ ಸಪೋರ್ಟ್ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕೋಲಾರ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ಮತಗಳು ಹೆಚ್ಚಿವೆ. ಆ ಮತಗಳನ್ನು ಸೆಳೆಯಬೇಕಾದರೆ ಕೆ.ಎಚ್.ಮುನಿಯಪ್ಪ ಬೆಂಬಲ ಅತ್ಯಗತ್ಯ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬೆಂಬಲ ನೀಡಿದಿದ್ದರಿಂದ ಕೆ.ಎಚ್.ಮುನಿಯಪ್ಪ ಈ ಚುನಾವಣೆಯಲ್ಲಿ ಬೆಂಬಲ ನೀಡದೇ ಇರಬಹುದು. ಇನ್ನು ಕುರುಬ ಮತಗಳು ಕೂಡಾ ಇಲ್ಲಿ ಹೆಚ್ಚಿದ್ದು, ಕುರುಬ ಸಮುದಾಯದ ವರ್ತೂರ್ ಪ್ರಕಾಶ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹೀಗಾಗಿ ಕುರುಬ ಮತಗಳು ಕೂಡಾ ಹಂಚಿಕೆಯಾಗಲಿವೆ. ಇನ್ನು ಜೆಡಿಎಸ್ ಪಕ್ಷ ಕೂಡಾ ಕೋಲಾರ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಸಮ್ಮಿಶ್ರ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣರಾದರು ಎಂಬ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಅವರ ಮೇಲೆ ಕೋಪ ಇದೆ. ಜೊತೆಗೆ ತುಮಕೂರಿನಲ್ಲಿ ದೇವೇಗೌಡರ ಸೋಲಿಗೂ ಸಿದ್ದರಾಮಯ್ಯ ಕಾರಣ ಎಂಬ ಆರೋಪವಿದೆ. ಹೀಗಾಗಿ ಕುಮಾರಸ್ವಾಮಿಯವರು ಕೂಡಾ ಸಿದ್ದರಾಮಯ್ಯ ಅವರು ಎಲ್ಲೇ ಸ್ಪರ್ಧೆ ಮಾಡಿದರೂ ಅಲ್ಲಿ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯರನ್ನು ಸೋಲಿಸಲು ಸ್ವಪಕ್ಷದವರು ಸೇರಿ ಎಲ್ಲಾ ಪಕ್ಷದವರೂ ತಂತ್ರಗಾರಿಕೆ ಎಣೆಯುತ್ತಿದ್ದಾರೆ. ಕುಮಾರಸ್ವಾಮಿಯವರು ಕೋಲಾರದಿಂದಲೇ ಪಂಚರತ್ನ ಯಾತ್ರೆಯನ್ನು ಮತ್ತೊಮ್ಮೆ ಶುರು ಮಾಡಲಿದ್ದಾರೆ. ನವೆಂಬರ್ 18 ಅಥವಾ 20 ರಂದು ಪಂಚರತ್ನ ಯಾತ್ರೆ ಶುರುವಾಗುವ ಸಾಧ್ಯತೆ ಇದೆ. ಇನ್ನು ಸಿದ್ದರಾಮಯ್ಯ ಅವರಿಗೆ ಇನ್ನೊಂದು ಸೇಫ್ ಕ್ಷೇತ್ರ ಅಂದ್ರೆ ಅದು ವರುಣಾ. ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಅವರು ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅಲ್ಲಿ ಹೀನಾಯವಾಗಿ ಸೋತಿದ್ದರು. ಈ ಬಾರಿ ಮಗ ಯತೀಂದ್ರ ಅವರು ಅಪ್ಪನಿಗೆ ಕ್ಷೇತ್ರ ಬಿಟ್ಟುಕೊಡಲು ರೆಡಿಯಾಗಿದ್ದಾರೆ. ಆದ್ರೆ ಮಗನ ಭವಿಷ್ಯ ಕಿತ್ತುಕೊಂಡಂತಾಗುತ್ತೆ ಎಂದು ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲೋದಕ್ಕೆ ಮನಸ್ಸು ಮಾಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಆಯ್ಕೆಯೇ ದೊಡ್ಡ ಕಗ್ಗಂಟಾಗಿದೆ.