ಕೇಂದ್ರದ ಕೊಡುಗೆ ಬಗ್ಗೆ ಬಿಜೆಪಿ ಜಾಹೀರಾತು; ಇದು ರಾಜ್ಯಕ್ಕೆ ಅವಮಾನ ಎಂದ ಸಿದ್ದರಾಮಯ್ಯ
ಬೆಂಗಳೂರು; ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಎಂಟು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡಿದೆ ಎಂದು ಬಿಜೆಪಿಯವರು ಜಾಹೀರಾತು ನೀಡುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡುಗೆ ಎಂಬ ಪದ ಬಳಸಿ ಜಾಹಿರಾತು ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿಯವರು ನಮ್ಮ ರಾಜ್ಯದ ಜನರನ್ನೇನು ದಡ್ಡರು, ಯೋಚಿಸುವ ಶಕ್ತಿ ಇಲ್ಲದವರು ಎಂದುಕೊಂಡಿದ್ದಾರಾ? ಈ ಬಿಜೆಪಿಯವರ ತಲೆ ಸರಿ ಇದೆಯಾ? ಎಂದೂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
2014 ರಿಂದ ಇದುವರೆಗೆ 8 ವರ್ಷಗಳಲ್ಲಿ ರಾಜ್ಯಕ್ಕೆ 1,29 ಲಕ್ಷ ಕೋಟಿ ರೂಗಳನ್ನು ನರೇಂದ್ರ ಮೋದಿಯವರು ಕೊಡುಗೆ ನೀಡಿದ್ದಾರೆ ಎಂದು ಪ್ರತಿ ನಿತ್ಯ ಜಾಹೀರಾತು ನೀಡಲಾಗುತ್ತಿದೆ. ಕೊಡುಗೆ ಎಂಬ ಪದ ಬಳಸಲು ಅವರ ಸ್ವಂತ ಮನೆಯಿಂದ ತೆಗೆದು ಖುಷಿಗೆ ಗಿಫ್ಟು ಕೊಡುವಂತೆ ಏನಾದರೂ ರಾಜ್ಯಕ್ಕೆ ಕೊಟ್ಟಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರಕ್ಕೆ ಏನಾದರೂ ಬೆನ್ನು ಮೂಳೆ ಇದ್ದರೆ ಮೊದಲು ಈ ಜಾಹಿರಾತಿಗೆ ವಿರೋಧ ವ್ಯಕ್ತಪಡಿಸಬೇಕಾಗಿತ್ತು. ಯಾಕೆಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ರಾಜ್ಯ ವಿರೋಧಿ ಧೋರಣೆಯಿಂದ ನಾವು ಬಹಳಷ್ಟನ್ನು ಕಳೆದುಕೊಂಡಿದ್ದೇವೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ 8 ವರ್ಷಗಳಲ್ಲಿ ನಮ್ಮ ರಾಜ್ಯದಿಂದ ಕನಿಷ್ಟ ಎಂದರೂ 19 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಒಂದರ್ಥದಲ್ಲಿ ದೋಚಿಕೊಂಡಿದೆ ಎಂದರೂ ಸರಿಯೆ. ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿ ಟಿಪ್ಸು ಕೊಟ್ಟಂತೆ ಕೆಲವು ಯೋಜನೆಗಳಿಗೆ ಕೊಟ್ಟಿರುವ 1.29 ಲಕ್ಷ ಕೋಟಿ ಅನುದಾನಗಳನ್ನು ಕೊಡುಗೆ ಎಂದು ಹೇಳಿ ಬಿಜೆಪಿ ನಾಯಕರು ರಾಜ್ಯದ ಸ್ವಾಭಿಮಾನವನ್ನು ದೆಲ್ಲಿಯ ಕಾಲ ಕೆಳಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.