ಎಲ್ಲದಕ್ಕೂ ಒಂದು ಮಿತಿ ಇದೆ, ಕಾನೂನು ಕೈಗೆತ್ತಿಕೊಂಡರೆ ಬಿಡಲ್ಲ; ಡಿ.ಕೆ.ಶಿವಕುಮಾರ್
ಬೆಂಗಳೂರು; ಕನ್ನಡ ಫಲಕಗಳ ಕಡ್ಡಾಯಕ್ಕೆ ಆಗ್ರಹಿಸಿ ಕರವೇ ನಿನ್ನೆ ಪ್ರತಿಭಟನೆ ಮಾಡಿತ್ತು. ಈ ವೇಳೆ ಗಲಾಟೆ ಮಾಡಿದ ಕೆಲ ಕರವೇ ಮುಖಂಡರನ್ನು ಬಂಧಿಸಲಾಗಿದೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಯಾರೂ ಕೂಡಾ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಮಿತಿ ಮೀರಿದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಪರ ಹೋರಾಟಗಾರರಿಗೆ ಹಾಗೂ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದ್ರೆ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡೋದನ್ನು ನಾವು ಸಹಿಸೋದಿಲ್ಲ. ನಾರಾಯಣ ಗೌಡರು ಬೇಕಿದ್ದರೆ ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲಿ. ಆದ್ರೆ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಸಿಎಂ ಕೂಡ ಸಚಿವರಿಗೆ ಕನ್ನಡದಲ್ಲಿಯೇ ಟಿಪ್ಪಣಿ ಬರೆಯೋದಕ್ಕೆ ಹೇಳಿದ್ದಾರೆ. ನಾವು ಕನ್ನಡಿಗರೇ, ಅವರ ಬೇಡಿಕೆ ಅನುಷ್ಠಾನಕ್ಕೆ ತರಲು ಸಮಯ ಬೇಕು ಎಂದು ಹೇಳಿದ್ದಾರೆ.