ಉದ್ಯಮಿಗೆ 5 ಕೋಟಿ ವಂಚನೆ ಕೇಸ್; ಹಾಲಶ್ರೀ ಸ್ವಾಮಿಯ ಕಾರು ಚಾಲಕ ವಶಕ್ಕೆ
ಬೆಂಗಳೂರು; ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ನಂಬಿಸಿ ಐದು ಕೋಟಿ ರೂಪಾಯಿ ಪಡೆದು ವಂಚಿಸಿದ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಈಗಾಗಲೇ ಎಂಟು ಆರೋಪಿಗಳಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನೂ ಹತ್ತು ದಿನಗಳ ಸಿಸಿಬಿ ವಶಕ್ಕೆ ನೀಡಲಾಗಿದೆ. ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಸೇರಿ ಎಲ್ಲಾ ಆರೋಪಿಗಳನ್ನೂ ವಿಚಾರಣೆಗೊಳಪಡಿಸಿದ್ದಾರೆ. ಆದ್ರೆ, ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಅಜ್ಞಾತ ಸ್ಥಳದಲ್ಲಿ ಕುಳಿತುಕೊಂಡು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸ್ವಾಮೀಜಿ ಸಿಕ್ಕರೆ ಪ್ರಕರಣ ತಿರುವು ಪಡೆಯಲಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಇತ್ತ ಸಿಸಿಬಿ ಪೊಲೀಸರು ಹಾಲಶ್ರೀ ಸ್ವಾಮೀಜಿಯ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ಬೆಂಗಳೂರಿಗೆ ಸಿಸಿಬಿ ಕಚೇರಿಗೆ ಕರೆತರಲಾಗುತ್ತಿದೆ. ಆತನನ್ನು ವಿಚಾರಣೆ ನಡೆಸಿದರೆ ಸ್ವಾಮೀಜಿ ಎಲ್ಲಿ ಅಡಗಿದ್ದಾರೆಂಬುದು ಗೊತ್ತಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.