ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸರ್ಕಾರಿ ಆಸ್ಪತ್ರೆ ವೈದ್ಯ ಸಾವು
ಹಾಸನ; ಆಳ ಅರಿಯದೆ ಸ್ನಾನ ಮಾಡಲೆಂದು ಹೇಮಾವತಿ ಹಿನ್ನೀರಿಗೆ ಇಳಿದಿದ್ದ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹೊಳೆನರಸಿಪುರದ ಕೆರಗೋಡಿನ ಸರ್ಕಾರಿ ಆಸ್ಪತ್ರೆ ವೈದ್ಯ 31 ವರ್ಷದ ಡಾ.ಚಂದ್ರಶೇಖರ್ ಸಾವನ್ನಪ್ಪಿದ ವೈದ್ಯರು. ಖೋನಾಪುರ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ತೇಲುತ್ತಿದ್ದ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.
ಖೋನಾಪುರ ಐಲ್ಯಾಂಡ್‌ನಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನವಿದೆ. ಅದಕ್ಕೆ ಡಾ.ಚಂದ್ರಶೇಖರ್ ಅವರು ನಡೆದುಕೊಳ್ಳುತ್ತಿದ್ದರು. ಹಲವು ವರ್ಷಗಳಿಂದ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಅವರು, ಅಲ್ಲಿನ ಹೇಮಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಈ ಶುಕ್ರವಾರವೂ ಕೂಡಾ ಡಾ.ಚಂದ್ರಶೇಖರ್ ಅವರು ದೇಗುಲದಲ್ಲಿ ಪೂಜೆ ಮಾಡಿಸುವುದಕ್ಕೂ ಮುನ್ನ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಮಳೆ ಕಡಿಮೆಯಾಗಿದ್ದರಿಂದ ನೀರು ಸಾಕಷ್ಟು ಕಡಿಮೆ ಇತ್ತು. ಹೀಗಾಗಿ ಅವರು ಆಳ ಅರಿಯದೇ ನೀರಿನಲ್ಲಿ ಮುಂದೆ ಹೋಗಿದ್ದಾರೆ.
ನೀರಿನ ಆಳ ಜಾಸ್ತಿ ಇರುವ ಕಡೆ ಹೋಗಿರುವ ಅವರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಯಾರೂ ಅವರನ್ನು ನೋಡಿಕೊಂಡಿಲ್ಲ. ಹೀಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದ್ರೆ ರಾತ್ರಿಯಾದರೂ ಡಾ.ಚಂದ್ರಶೇಖರ್ ಮನೆಗೆ ವಾಪಸ್ ಬಾರದ ಕಾರಣ ಪೋಷಕರು ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದ್ರೆ ಎಷ್ಟು ಬಾರಿ ಕರೆ ಮಾಡಿದರೂ ಯಾರೂ ರಿಸೀವ್ ಮಾಡಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಅರಕಲಗೂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಬಳಿಕ ಗೊರೂರು ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಇನ್ನು ಇದೇ ವೇಳೆ ಗಸ್ತಿನಲ್ಲಿದ್ದ ಗೊರೂರು ಪೊಲೀಸರು ತುಂಬಾ ಹೊತ್ತಿನಿಂದ ಕಾರೊಂದು ನಿಂತಲ್ಲೇ ನಿಂತಿದ್ದನ್ನು ನೋಡಿದ್ದಾರೆ. ಆ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಡಾ.ಚಂದ್ರಶೇಖರ್ ಅವರ ಬಟ್ಟೆ ಪತ್ತೆಯಾಗಿದೆ. ಹಾಗೆಯೇ ನದಿಯಲ್ಲಿ ಹುಡುಕಿದಾಗ, ಚಂದ್ರಶೇಖರ್ ಮೃತದೇಹ ನದಿಯಲ್ಲಿ ತೇಲುತ್ತಿರುವುದು ಕಂಡಿದೆ.