BengaluruEconomy

ಗೃಹಬಳಕೆ ಎಲ್‌ಪಿಜಿಗೆ 200 ರೂ. ಸಬ್ಸಿಡಿ; 900 ರೂ.ಗೆ ಸಿಗಲಿದೆ ಅಡುಗೆ ಅನಿಲ

ನವದೆಹಲಿ; ಕೇಂದ್ರ ಸರ್ಕಾರ ಕೊನೆಗೂ ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟಿದೆ. ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಅಂದರೆ ಅಡುಗೆ ಅನಿಲ ಸಿಲಿಂಡರ್‌ ಒಂದಕ್ಕೆ ಕೇಂದ್ರ ಸರ್ಕಾರ 200 ರೂಪಾಯಿ ಸಬ್ಸಿಡಿ ನೀಡಿದೆ. ಹೀಗಾಗಿ ಇನ್ಮೇಲೆ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಒಂದು ಸುಮಾರು 900 ರೂಪಾಯಿ ಆಸುಪಾಸು ಸಿಗಲಿದೆ.

ಇಂದು ನಡೆದ ಕೇಂದ್ರ ಕ್ಯಾಬಿನೆಟ್‌ ಸಭೆಯಲ್ಲಿ ಈ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಬ್ಸಿಡಿ ಹಣ ಮೊದಲಿನಂತೆ ನೇರವಾಗಿ ಗ್ರಾಹಕರಿಗೆ ವರ್ಗಾವಣೆ ಆಗೋದಿಲ್ಲ. ಬದಲಾಗಿ, ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ನೀಡುತ್ತಿದ್ದಂತೆ ನೇರವಾಗಿ ಇಂಡಿಯನ್‌ ಆಯಿಲ್‌, ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್‌ ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ಗೆ ಸಬ್ಸಿಡಿ ಹಣ ನೀಡಲಾಗುತ್ತದೆ. ಹೀಗಾಗಿ ಗ್ರಾಹಕರು ಸಬ್ಸಿಡಿ ಹಣ ಕಳೆದು ಉಳಿದ ಹಣವನ್ನು ನೀಡಿ ಎಲ್‌ಪಿಜಿ ಖರೀದಿ ಮಾಡಬಹುದಾಗಿದೆ.

ತೈಲ ಕಂಪನಿಗಳಿಗೆ ನೇರವಾಗಿ ಹಣ ಪಾವತಿಯಾಗುವ ಕಾರಣ ಖರೀದಿಸುವಾಗಲೇ 200 ರೂ. ಕಡಿತಗೊಳ್ಳಲಿದೆ.  ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂನಲ್ಲಿ ಚುನಾವಣೆಗಳು ಹತ್ತಿರದಲ್ಲಿವೆ. ಜೊತೆಗೆ ಲೋಕಸಭಾ ಚುನಾವಣೆ ಕೂಡಾ ಹತ್ತಿರಕ್ಕೆ ಬರುತ್ತಿದೆ. ಹೀಗಾಗಿ, ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.

 

Share Post