ಸರ್ಕಾರಿ ಸಂಸ್ಥೆಗಳಿಂದ ಜಲಮಂಡಳಿಗೆ 16202 ಕೋಟಿ ಬಾಕಿ..!; ಜನರ ಮೇಲೆ ಹೊರೆ ಬೀಳುತ್ತಾ..?
ಬೆಂಗಳೂರು; ಈಗಾಗಲೇ ವಿದ್ಯುತ್ ಬಿಲ್ ಏರಿಕೆಯಾಗಿದೆ. ಬೇರೆ ಬೇರೆ ದರಗಳು ಏರಿಕೆಯಾಗುತ್ತಿವೆ. ಇದರ ನಡುವೆ ನೀರಿನ ಬಿಲ್ ಕೂಡಾ ಜಾಸ್ತಿಯಾಗುವ ಎಲ್ಲಾ ಸಾಧ್ಯತೆ ಇದೆ. ಯಾಕಂದ್ರೆ ಜಲಮಂಡಳಿ ತೀರಾ ನಷ್ಟದಲ್ಲಿದ್ದು, ಬರುವ ಆದಾಯದಲ್ಲಿ ಬೆಸ್ಕಾಂ ಬಿಲ್ ಕೂಡಾ ಕಟ್ಟಟೋದಕ್ಕೆ ಆಗುತ್ತಿಲ್ಲ. ಹೀಗಾಗಿ, ವಾಟರ್ ಬಿಲ್ ಏರಿಕೆ ಮಾಡುವುದಕ್ಕಾಗಿ ಜಲಮಂಡಳಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.
ಅಂದಹಾಗೆ, ಜಲಮಂಡಳಿ ನಷ್ಟಕ್ಕೆ ಹೋಗಲು ಕಾರಣವೇ ಸರ್ಕಾರಿ ಸಂಸ್ಥೆಗಳು. ಸರ್ಕಾರಿ ಸಂಸ್ಥೆಗಳಿಂದಲೇ ಜಲಮಂಡಳಿಗೆ 16201.89 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಡಿಫೆನ್ಸ್ ಇಂದ 28 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಅಧೀನ ಇಲಾಖೆಗಳಿಂದ 22 ಕೋಟಿ ರೂಪಾಯಿ, ರಾಜ್ಯ ಸರ್ಕಾರದ ಅಧೀನ ಕಚೇರಿಗಳಿಂದ 8 ಕೋಟಿ ರೂಪಾಯಿ, ಬಿಬಿಎಂಪಿಯಿಂದ 21 ಕೋಟಿ ರೂಪಾಯಿ ಹಾಗೂ ನಿಗಮ, ಮಂಡಳಿಗಳಿಂದ 9 ಕೋಟಿ ರೂಪಾಯಿ ಹಣ ಜಲಮಂಡಳಿಗೆ ಬರಬೇಕಿದೆ.
ಹಲವು ವರ್ಷಗಳಿಂದ ಈ ಸಂಸ್ಥೆಗಳು ನೀರಿನ ಬಿಲ್ ಕಟ್ಟಿಲ್ಲ. ಬಾಕಿ ಮೊತ್ತದ ಮೇಲೆ ದಂಡ ವಿಧಿಸಿದರೂ ಕೂಡಾ ಕೇರ್ ಮಾಡುತ್ತಿಲ್ಲ. ಹೀಗಾಗಿ ಜಲಮಂಡಳಿಗೆ ತಲೆನೋವಾಗಿದೆ. ಸಾಮಾನ್ಯ ಜನರು ಒಂದು ತಿಂಗಳು ಬಿಲ್ ಕಟ್ಟಿಲ್ಲ ಅಂದರೂ ಕನೆಕ್ಷನ್ ಕಟ್ ಮಾಡುತ್ತಾರೆ. ಆದ್ರೆ ಸರ್ಕಾರಿ ಸಂಸ್ಥೆಗಳು ವರ್ಷಾನುಗಟ್ಟಲೆ ಬಿಲ್ ಕಟ್ಟದಿದ್ದರೂ ಸುಮ್ಮನಿರುವುದು ವಿಪರ್ಯಾಸದ ಸಂಗತಿ.