ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ; ಅಮೃತ್ ಪಾಲ್ ಹತ್ತು ದಿನ ಸಿಐಡಿ ಕಸ್ಟಡಿಗೆ
ಬೆಂಗಳೂರು; ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನು ಹತ್ತು ದಿನ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಇಂದು ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ಕೋರ್ಟ್‌ಗೆ ಸಿಐಡಿ ಅಧಿಕಾರಿಗಳು ಅಮೃತ್ ಪಾಲ್ ಅವರನ್ನು ವಶಕ್ಕೆ ನೀಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ಕೋರ್ಟ್, ಜುಲೈ 13 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಅಮೃತ್ ಪಾಲ್ ಅವರು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು. 545 ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿತ್ತು. ಈ ಅಕ್ರಮಕ್ಕೆ ಅಮೃತ್ ಪಾಲ್ ಕೂಡಾ ಸಾಥ್ ನೀಡಿದ್ದಾರೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಅಮೃತ್ ಪಾಲ್‌ರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾಗ ಅವರನ್ನು ಬಂಧಿಸಲಾಗಿದೆ..
ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಡಿಜಿಪಿ ಶ್ರೇಣಿಯ ಅಧಿಕಾರಿಯನ್ನು ಬಂಧಿಸಲಾಗಿದೆ. ಅಕ್ರಮ ಕೇಳಿಬಂದ ಮೇಲೆ ಅಮೃತ್ ಪಾಲ್ ಅವರನ್ನು ಆಂತರಿಕ ಭದ್ರತಾ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. ಅಮೃತ್ ಪಾಲ್ ಅವರ ಕಚೇರಿಯಲ್ಲೇ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಒಎಂಆರ್ ಶೀಟ್ ತಿದ್ದಲಾಗಿತ್ತು. ಖಚಿತ ಸಾಕ್ಷ್ಯಗಳು ಸಿಕ್ಕಿದ್ದರಿಂದಲೇ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಎಡಿಜಿಪಿ ಅಮೃತ್ ಪಾಲ್ ಬಂಧನದಿಂದಾಗಿ ದೊಡ್ಡ ದೊಡ್ಡವರಿಗೆಲ್ಲಾ ನಡುಕ ಶುರುವಾಗಿದೆ.