ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಬ್ರೇಕ್..!
ಬೆಂಗಳೂರು; ರಾಜ್ಯದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಯಾರೂ ಕೂಡಾ ವಿಡಿಯೋ ಚಿತ್ರೀಕರಣ, ಫೋಟೋ ತೆಗೆಯುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳು ಕರ್ತವ್ಯದ ಸಮಯದಲ್ಲಿ ಬಂದು ಫೋಟೋ ಕ್ಲಿಕ್ಕಿಸುವುದು ಹಾಗೂ ವಿಡಿಯೋ ಚಿತ್ರೀಕರಿಸಬಾರದು ಎಂದು ಈ ಆದೇಶದಲ್ಲಿ ಹೇಳಲಾಗಿದೆ.
ರಾಜ್ಯ ಸರ್ಕಾರದ ಪರವಾಗಿ ಅಧೀನ ಕಾರ್ಯದರ್ಶಿ ಕೆ.ವೆಂಕಟೇಶ್ ಈ ಆದೇಶವನ್ನು ಹೊರಡಿಸಿದ್ದಾರೆ. ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಇಲಾಖೆಗಳ ಕಚೇರಿಗಳಿಗೆ ಇದು ಅನ್ವಯವಾಗುತ್ತದೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ನಿತ್ಯ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. ಈ ವೇಳೆ ಖಾಸಗಿ ವ್ಯಕ್ತಿಗಳು ಬಂದು ವಿಡಿಯೋ ಮಾಡುವುದು, ಫೋಟೋ ತೆಗೆಯುವುದು ಮಾಡಿದರೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ, ಅಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಯಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಈ ರೀತಿ ಕಚೇರಿಯೊಳಗೆ ಬಂದು ವಿಡಿಯೋ ಮಾಡುವುದರಿಂದ ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆಯಾಗುತ್ತಿದೆ. ಕೆಲವರು ಸರ್ಕಾರಿ ಕಚೇರಿಗಳಿಗೆ ಬಂದು ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಇದರಿಂದ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.