Bengaluru

ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಭಜರಂಗದಳ ಪ್ರತಿಭಟನೆ

 ಬೆಂಗಳೂರು:  ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಫೆಬ್ರವರಿ 23ರಂದು ರಾಜ್ಯಾದ್ಯಂತ ಭಜರಂಗದಳ ಪ್ರತಿಭಟನೆ ನಡೆಸುತ್ತಿದೆ.  ಶಿವಮೊಗ್ಗದಲ್ಲಿ ಕಾರ್ಯಕರ್ತನ ಹತ್ಯೆಯಿಂದ ರೋಸಿಹೋದ ಭಜರಂಗದಳ ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತಿದೆ.

ಹಿಜಾಬ್‌ ವಿಚಾರವಾಗಿ ನಗರದಲ್ಲಿ ಮೂಡಿದ್ದ ಗೊಂದಲ ಭಾನುವಾರ ರಾತ್ರಿ ಹಿಂದೂ ಕಾರ್ಯಕರ್ತನ ಹತ್ಯೆಯಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ.  ಶಿವಮೊಗ್ಗ ನಗರದಲ್ಲಿ ಗದ್ದಲ, ಗಲಭೆ, ಕಲ್ಲು ತೂರಾಟ, ಕಾರು, ಮನೆ, ಅಂಗಡಿಗಳ ಗಾಜನ್ನು ಉದ್ರಿಕ್ತರು ಪುಡಿ ಪುಡಿ ಮಾಡಿದ್ದಾರೆ. ರಸ್ತೆಯಲ್ಲಿ ಸಿಕ್ಕ ಸಿಕ್ಕ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಈಗಾಗಲೇ ಕೊಲೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ನಗರದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇಂದು ರಾಜ್ಯಾದ್ಯಂತ ಹಲವೆಡೆ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಪ್ರಕರಣ, ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ನಗರದ ರಾಯಣ್ಣ ವೃತ್ತದಲ್ಲಿ ಬೃಹತ್‌  ಪ್ರತಿಭಟನೆ ನಡೆಸಲಾಗಿದೆ. ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕೊಲೆಗಡುಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿದ್ದಾರೆ.

ದೊಡ್ಡಬಳ್ಳಾಪುರ: ನಗರದಲ್ಲೂ ಕೂಡ ಪ್ರತಿಭಟನೆ ಕಾವು ಹೆಚ್ಚಾಗಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಡಿಕ್ರಾಸ್‌ ರಸ್ತೆ ತಡೆದು  ಪ್ರತಿಭಟನೆ ನಡೆಸಿದ್ರು. ಕೂಡಲೇ SDPI, PFIಬ್ಯಾನ್‌ ಮಾಡಬೇಕೆಂದು ಆಗ್ರಹಿಸಿದ್ರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕೂಡಲೇ ಹರ್ಷನನ್ನು ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯ ಮಾಡಿದ್ರು.

ಆನೇಕಲ್:‌ ಹತ್ಯಾಯಾದ ಹರ್ಷನ ಭಾವಚಿತ್ರ ಹಿಡಿದು ಬೆಂಗಳೂರಿನ ಆನೇಕಲ್‌ ತಾಲೂಕಿನ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಚಂದಾಪುರದಿಂದ ಸೂರ್ಯನಗರವರೆಗೂ ಪಂಜಿನ ಮೆರವಣಿಗೆ ಹಿಡಿದು ಪ್ರತಿಭಟನೆ ನಡೆಸಿದ್ರು. ಹೊಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತೆಡೆದು ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಹ್ರಹಿಸಿದ್ರು.

ಬೆಂಗಳೂರು:  ಹರ್ಷನ ಹತ್ಯೆ ಖಂಡಿಸಿ ಇಂದು ಟೌನ್‌ ಹಾಲ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. RSS, VHP, ಭಜರಂಗದಳ, ಶ್ರೀರಾಮಸೇನೆ ಸೇರಿ ಹಲವು ಸಂಘಟನೆಗಳಿಂದ ಸಂಜೆ 5.30ಕ್ಕೆ ಪ್ರತಿಭಟನೆ ನಡೆಯಲಿದೆ.

ಶಿವಮೊಗ್ಗ:  ಕಾರ್ಯಕರ್ತನ ಹತ್ಯೆ ಖಂಡಿಸಿ ಶಿವಮೊಗ್ಗದ ಸೊರಬ ತಾಲೂಕು ಸಂಪೂರ್ಣ ಬಂದ್‌ ಘೋಷಣೆ ಮಾಡಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ ಘೋಷಣೆ ಮಾಡಲಾಗಿದೆ. ಹಿಂದೂ ಪರ ಸಂಘಟನೆಗಳು ಬಂದ್‌ ಘೋಷಣೆ ಮಾಡಲಾಗಿತ್ತು ಸೊರಬ ಸಂಪೂರ್ಣ ಲಾಕ್‌ ಆಗಿದೆ.

ಹಾಗೆಯೇ ರಾಮನಗರ, ವಿಜಯಪುರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಹೆಚ್ಚಾಗಿದೆ. ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post