BengaluruPolitics

ದಕ್ಷಿಣಕ್ಕೆ ಅಮಿತ್‌ ಷಾ.. ಉತ್ತರಕ್ಕೆ ನರೇಂದ್ರ ಮೋದಿ..!; ವರ್ಕೌಟ್‌ ಆಗುತ್ತಾ ʻಶಾʼಣಕ್ಯ ತಂತ್ರ..?

 ಬೆಂಗಳೂರು;  ಮೇ ಮೊದಲ ವಾರದಲ್ಲಿ ರಾಜ್ಯದಲ್ಲಿ ಸರ್ಕಾರ ಬರ್ಬೇಕು… ಅಷ್ಟರೊಳಗೆ ಚುನಾವಣೆ ನಡೆಯಬೇಕು… ಅಂದ್ರೆ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಸರಿಯಾಗಿ ಮೂರೂವೇ ತಿಂಗಳಷ್ಟೇ ಉಳಿದಿದೆ… ಮೂರೂ ಪಕ್ಷಗಳು ಈಗಾಗಲೇ ಜನರನ್ನು ಒಲಿಸಿಕೊಳ್ಳೋಕೆ ಯಾತ್ರೆಗಳು ಶುರು ಮಾಡಿವೆ… ಇತ್ತ ಆಡಳಿತಾರೂಢ ಬಿಜೆಪಿ ರಾಜ್ಯವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭಾರಿ ತಂತ್ರಗಾರಿಕೆಯನ್ನೇ ನಡೆಸುತ್ತಿದೆ… ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ಮಂಡ್ಯಕ್ಕೆ ಆಗಮಿಸಿದ್ದರು.. ಅನಂತರ ಎರಡು ದಿನ ರಾಜ್ಯದಲ್ಲೇ ಇದ್ದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಬಗ್ಗೆ ಚರ್ಚೆಗಳು ನಡೆಸಿದ್ದರು.. ಈ ಭಾಗದ ನಾಯಕರಿಗೆ ಕೆಲವೊಂದು ಸಲಹೆಗಳನ್ನು ನೀಡಿಹೋಗಿದ್ದರು.. ಅಮಿತ್‌ ಷಾ ಭೇಟಿ ಹಿಂದೆ ಒಕ್ಕಲಿಗರನ್ನು ಒಲಿಸಿಕೊಳ್ಳೋ ತಂತ್ರ ಅಡಗಿದೆ ಅನ್ನೋದನ್ನು ಈಗಾಗಲೇ ಹೇಳಿದ್ದೇವೆ.. ಇದೀಗ ಮತ್ತೊಂದು ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ಗುರುವಾರದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ… ಇದ್ರಿಂದಾಗಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ..

ಜನವರಿ 12ರಂದು ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವ ಜನೋತ್ಸವ ಶುರುವಾಗಲಿದೆ.. ಅದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ… ಇದರ ನೆಪದಲ್ಲಿ ಅವ್ರು ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ… ಸರ್ಕಾರಿ ಕಾರ್ಯಕ್ರಮವಾದ್ರೂ ಮಂಡ್ಯದಲ್ಲಿ ಆದಂತೆ ಹುಬ್ಬಳ್ಳಿಯೂ ಕೇಸರಿಮಯವಾಗಲಿದೆ…

ಮೊನ್ನೆ ಅಮಿತ್‌ ಷಾ ಮಂಡ್ಯಕ್ಕೆ ಬಂದು ಹೋಗಿದ್ದು, ಇದೀಗ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರುತ್ತಿರುವುದು ನೋಡಿದರೆ, ಉತ್ತರಕ್ಕೆ ಮೋದಿ, ದಕ್ಷಿಣಕ್ಕೆ ಅಮಿತ್‌ ಶಾ ಅನ್ನೋದು ಖಾತ್ರಿಯಾಗುತ್ತೆ.. ಹೌದು, ಈ ಬಾರಿ ಬಿಜೆಪಿ ಲಿಂಗಾಯತರ ಮತಗಳನ್ನಲ್ಲದೆ, ಒಕ್ಕಲಿಗರ ಮತಗಳನ್ನೂ ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿದೆ… ಹಳೇ ಮೈಸೂರು ಭಾಗದ ಒಕ್ಕಲಿಗರು ಮೊದಲಿನಿಂದಲೂ ಬಿಜೆಪಿಗೆ ಕನೆಕ್ಟ್‌ ಆಗಿಲ್ಲ… ಇಲ್ಲಿನ ಒಕ್ಕಲಿಗರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಜೊತೆ ಇದ್ದಾರೆ… ಆದ್ರೆ, ಈ ಬಾರಿ ಬಿಜೆಪಿ ಒಂದಷ್ಟು ಒಕ್ಕಲಿಗ ನಾಯಕರನ್ನು ಮುಂದಿಟ್ಟುಕೊಂಡು ಒಕ್ಕಲಿಗರನ್ನು ಸೆಳೆಯೋ ಪ್ರಯತ್ನಕ್ಕೆ ಮುಂದಾಗಿದೆ…

ಬೇರೆ ಪಕ್ಷದಲ್ಲಿರುವವರನ್ನು ಸೆಳೆಯೋದ್ರಲ್ಲಿ ಅಮಿತ್‌ ಷಾ ಚಾಣಕ್ಯ… ಹಲವು ರಾಜ್ಯಗಳಲ್ಲಿ ಅವರ ತಂತ್ರಗಾರಿಕೆ ವರ್ಕೌಟ್‌ ಆಗಿದೆ… ಅಷ್ಟೇ ಏಕೆ ನರೇಂದ್ರ ಮೋದಿಗೆ ದೊಡ್ಡ ಹೆಸರು ಬರೋದಕ್ಕೂ ಅಮಿತ್‌ ಷಾ ಅವರ ತಂತ್ರಗಾರಿಕೆ ಪ್ರಮುಖ ಕಾರಣ.. ಹೀಗಾಗಿಯೇ ಬಿಜೆಪಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಅಮಿತ್‌ ಷಾ ಅನುಭವವನ್ನು ಬಳಸಿಕೊಳ್ಳಲು ಮುಂದಾಗಿದೆ.. ಮೊನ್ನೆ ಅಮಿತ್‌ ಷಾ ಅವರು ಮಂಡ್ಯಕ್ಕೆ ಬಂದಾಗಲೇ ಹಲವು ಜೆಡಿಎಸ್‌ ಮುಖಂಡರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.. ಇನ್ನು ಸಚಿವರಾದ ಅಶ್ವತ್ಥನಾರಾಯಣ, ಡಾ.ಕೆ.ಸುಧಾಕರ್‌ ಮುಂತಾದವರನ್ನು ಒಕ್ಕಲಿಗ ನಾಯಕರೆಂದು ಬಿಂಬಿಸಿ, ಅವರ ವರ್ಚಸ್ಸು ಹೆಚ್ಚಿಸುವುದಲ್ಲದೆ ಅವರ ಮೂಲಕ ಒಕ್ಕಲಿಗ ಮತಗಳನ್ನು ಸೆಳೆಯೋ ಪ್ರಯತ್ನ ಮಾಡಲಾಗ್ತಿದೆ…

ಶೀಘ್ರದಲ್ಲೇ ಮೈಸೂರು-ಬೆಂಗಳೂರು ದಶಪಥ ರಸ್ತೆಯ ಉದ್ಘಾಟನೆ ನಡೆಯಲಿದೆ.. ಅದರ ನೆಪದಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯಲಿದೆ… ಅದಕ್ಕೂ ಕೇಂದ್ರದ ಬಹುತೇಕ ಬಿಜೆಪಿ ನಾಯಕರು ಬರಲಿದ್ದಾರೆ.. ಆ ಮೂಲಕವೂ ಹಳೇ ಮೈಸೂರು ಭಾಗದ ಮತದಾರರನ್ನು ಸೆಳೆಯೋ ಪ್ರಯತ್ನ ಮಾಡಲಾಗುತ್ತದೆ.. ಟೋಟಲ್‌ ಆಗಿ ಅಮಿತ್‌ ಷಾ ಅವರು ಹಳೇ ಮೈಸೂರು ಭಾಗದಲ್ಲಿ ಹತ್ತಾರು ಭಾರಿ ಸುತ್ತಾಡಿ, ಪಕ್ಷ ಸಂಘಟನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ..

ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಹೆಚ್ಚಿದ್ದಾರೆ.. ಲಿಂಗಾಯತರು ಮೊದಲಿನಿಂದಲೂ ಬಿಜೆಪಿಯ ಕೈಹಿಡಿದಿದ್ದಾರೆ.. ಆದ್ರೆ ಈ ಬಾರಿ ಮೀಸಲಾತಿ ಸೇರಿದಂತೆ ಹಲವು ವಿಚಾರವಾಗಿ ಒಂದಷ್ಟು ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ.. ಇದ್ರಿಂದ ಬಿಜೆಪಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. ಹೀಗಾಗಿ ಮುಂದಾಗಿ ನಷ್ಟವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯೇ ಈ ಭಾಗದಲ್ಲಿ ಅಖಾಡಕ್ಕಿಳಿಯಲಿದ್ದಾರೆ… ಮೋದಿಯವರು ಉತ್ತರ ಕರ್ನಾಟಕ ಭಾಗದಲ್ಲಿ ಹಲವು ರ್ಯಾಲಿಗಳನ್ನು ನಡೆಸಿ, ಬಿಜೆಪಿ ವೋಟ್‌ ಬ್ಯಾಂಕ್‌ನನ್ನು ಭದ್ರಪಡಿಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದಾರೆ… ಸಿದ್ದೇಶ್ವರ ಶ್ರೀಗಳ ಜೊತೆ ಉತ್ತಮ ಒಡನಾಟವಿದ್ದ ನರೇಂದ್ರ ಮೋದಿ, ಸಿದ್ದೇಶ್ವರ ಶ್ರೀಗಳ ಭಕ್ತರನ್ನು ಸೆಳೆಯೋ ಪ್ಲ್ಯಾನ್‌ ಮಾಡಿದ್ದಾರೆ… ಇನ್ನು ಪಂಚಮಸಾಲಿ ಲಿಂಗಾಯತರು ಮೀಸಲಾತಿ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ.. ಅವರನ್ನು ಸಮಾಧಾನಪಡಿಸೋದು ಮೋದಿಗೆ ಕಷ್ಟವಾಗುವುದಿಲ್ಲ ಎನ್ನಲಾಗುತ್ತಿದೆ…

ಯಡಿಯೂರಪ್ಪರನ್ನು ಬಿಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ದಡ ಸೇರಿಸುವವರು ಯಾರೂ ಇಲ್ಲ.. ಹೀಗಾಗಿ, ಈ ಬಾರಿ ಕೇಂದ್ರದ ನಾಯಕರೇ ರಾಜ್ಯದ ಬಿಜೆಪಿಯ ನೊಗವನ್ನು ಹೊರಲಿದ್ದಾರೆ… ಇದಕ್ಕಾಗಿ ಮೋದಿ ಹಾಗೂ ಅಮಿತ್‌ ಷಾ ಎರಡು ಭಾಗವಾಗಿ ರಾಜ್ಯವನ್ನು ಹಂಚಿಕೊಂಡಿದ್ದಾರೆ.. ಅಮಿತ್‌ ಷಾ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ನಡೆಸಿದರೆ, ಮೋದಿ ಉತ್ತರ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ.. ಇಬ್ಬರೂ ನಾಯಕರು ರಾಜ್ಯ ಎರಡು ಪ್ರಮುಖ ಸಮುದಾಯಗಳಾದ ಒಕ್ಕಲಿಗ ಹಾಗೂ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.. ಈ ಇಬ್ಬರು ನಾಯಕರ ತಂತ್ರಗಾರಿಕೆ ವರ್ಕೌಟ್‌ ಆದ್ರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.. ಆದ್ರೆ, ಒಕ್ಕಲಿಗರನ್ನು ಅಷ್ಟು ಸುಲಭವಾಗಿ ಸೆಳೆಯೋದಕ್ಕೆ ಆಗೋದಿಲ್ಲ.. ಬಿಜೆಪಿಯ ಈ ತಂತ್ರಗಾರಿಕೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ…

Share Post