ಸಚಿವರು ಹೇಳೋದೊಂದು ಅಧಿಕಾರ ಹೇಳೋದು ಮತ್ತೊಂದು; ನಾಳೆಯಿಂದ ಸಿಗಲ್ವಾ ಅನ್ನಭಾಗ್ಯ ಹಣ..?
ಬೆಂಗಳೂರು; ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ವಿಸ್ತರಣೆಯಾಗುತ್ತದೆ. ನಾಳೆಯಿಂದಲೇ ಅಕ್ಕಿಯ ಜೊತೆ ಹಣವನ್ನೂ ನೀಡಲಾಗುತ್ತದೆ ಎಂದು ಇಂದು ಬೆಳಗ್ಗೆಯೇ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದರು. ಆದ್ರೆ ನಾಳೆಯಿಂದಲೇ ಖಾತೆಗೆ ಹಣ ಜಮೆ ಮಾಡೋಕೆ ಆಗೋದಿಲ್ಲ ಅಂತಿದ್ದಾರೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಂಡಿ ಜ್ಞಾನೇಂದ್ರ.
1 ಕೋಟಿ 28 ಲಕ್ಷ ಬಿಪಿಎಲ್ ಕಾರ್ಡ್‌ಗಳು ರಾಜ್ಯದಲ್ಲಿವೆ. ಇದರಲ್ಲಿ 1.22 ಕೋಟಿ ಕಾರ್ಡ್‌ದಾರರ ಕುಟುಂಬದಲ್ಲಿ ಒಬ್ಬರಾದರೂ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆದ್ರೆ ಉಳಿದ ಆರು ಲಕ್ಷ ಕುಟುಂಬಗಳಿಗೆ ಬ್ಯಾಂಕ್ ಖಾತೆ ಇಲ್ಲ. ಕೆಲವರು ಬ್ಯಾಂಕ್ ಖಾತೆ ಹೊಂದಿದ್ದರೂ ಆಧಾರ್ ಲಿಂಕ್ ಆಗಿಲ್ಲ. ಆಧಾರ್ ಲಿಂಕ್ ಆಗದಿದ್ದರೆ ಬ್ಯಾಂಕ್ ಖಾತೆ ಆಕ್ಟೀವ್ ಆಗಿರುವುದಿಲ್ಲ. ಹೀಗಾಗಿ ಸಮಸ್ಯೆ ಆಗುತ್ತದೆ. ಇದರಿಂದಾಗಿ ಅನ್ನಭಾಗ್ಯ ಫಲಾನುಭವಿಗಳಿಗೆ ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಕನಿಷ್ಠ 10 ರಿಂದ 15 ದಿನಗಳಾದರೂ ಬೇಕಾಗುತ್ತವೆ ಎಂದು ಜ್ಞಾನೇಂದ್ರ ಹೇಳಿದ್ದಾರೆ.