BengaluruPolitics

ಡಿ.30ಕ್ಕೆ ಸಿದ್ದರಾಮಯ್ಯ ಮತ್ತೊಂದು ಶಕ್ತಿ ಪ್ರದರ್ಶನ; ಬಿ.ಕೆ.ಹರಿಪ್ರಸಾದ್‌ ಮತ್ತೊಂದು ಸಮಾವೇಶ!

ಬೆಂಗಳೂರು;  ವರ್ಷದ ಹಿಂದೆ ಸಿದ್ದರಾಮಯ್ಯ ಅವರ 75 ನೇ ಜನ್ಮ ದಿನಾಚರಣೆಯಲ್ಲಿ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿತ್ತು. ಇದನ್ನು ಸಿದ್ದರಾಮಯ್ಯ ಅವರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿಯೇ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದರು. ಇದೀಗ ಸಿದ್ದರಾಮಯ್ಯ ಇಂತಹದ್ದೇ ಮತ್ತೊಂದು ಬೃಹತ್‌ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲಿಗರು ಇದೇ ಡಿಸೆಂಬರ್‌ 30 ರಂದು ಚಿತ್ರದುರ್ಗದಲ್ಲಿ ಬೃಹತ್‌ ಅಹಿಂದ ಸಮಾವೇಶ ಆಯೋಜನೆ ಮಾಡಿದ್ದು, ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಈಡಿಗ-ಬಿಲ್ಲವ ಸಮುದಾಯವನ್ನು ಒಡೆಯುತ್ತಿದ್ದಾರೆ ಎಂಬ ಆರೋಪವಿದೆ. ಈ ಕಾರಣಕ್ಕಾಗಿಯೇ ಈಡಿಗ-ಬಿಲ್ಲವ ಸಮುದಾಯದ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಹಿಂದೆ ಹರಿಪ್ರಸಾದ್‌ ಅವರು ಈಡಿಗ-ಬಿಲ್ಲವ ಸೇರಿ ಅತಿ ಹಿಂದುಳಿದ ವರ್ಗಗಳ ಪೂರ್ವಭಾವಿ ಸಮಾವೇಶ ನಡೆಸಿದ್ದರು. ಈ ಸಮಾವೇಶದಲ್ಲಿ ಬಿ.ಕೆ.ಹರಿಪ್ರಸಾದ್‌ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಪ್ರತೀಕಾರ ಎಂಬಂತೆ ಈಡಿಗರ ಸಮಾವೇಶ ನಡೆಸಲು ಮಧು ಬಂಗಾರಪ್ಪ ಅವರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು ಎಂಬ ಆರೋಪವಿದೆ.

ಇನ್ನು ಬಿ.ಕೆ.ಹರಿಪ್ರಸಾದ್‌ ಅವರು ಜನವರಿಯಲ್ಲಿ ಮತ್ತೊಂದು ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸಿದ್ದರಾಮಯ್ಯ ಅವರು ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಸುವ ಮೂಲಕ ಮತ್ತೊಮ್ಮೆ ತಮ್ಮ ಶಕ್ತಿ ಸಾಬೀತು ಮಾಡೋದಕ್ಕೆ ಹೋಗುತ್ತಿದ್ದಾರೆ.

ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್‌ ನಡುವಿನ ಫೈಟ್‌ ನೋಡಿದರೆ ಹಿಂದುಳಿದ ವರ್ಗಗಳ ನಾಯಕ ಸ್ಥಾನಕ್ಕಾಗಿ ಇಬ್ಬರು ನಡುವೆ ಫೈಟ್‌ ನಡೆಯುತ್ತಿರುವಂತೆ ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಬೃಹತ್‌ ಸಮಾವೇಶದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ತೀರ್ಮಾನ ಮಾಡಿದ್ದಾರೆ ಎನ್ನಲಾಗ್ತಿದೆ.

 

Share Post