Bengaluru

ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆ; ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಜನಪರ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಹೆಚ್ಚಿಸಿಕೊಂಡಿವೆ. ಆದ್ರೆ ಕಾಂಗ್ರೆಸ್ ಪಕ್ಷ ಹಿಜಾಬ್ ಒಳಗೆ ಸೇರಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.

ಮಲ್ಲೇಶ್ವರದಲ್ಲಿ ನಡೆಯುತ್ತಿರುವ  ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗಲಭೆಯನ್ನು ಪ್ರಾರಂಭಿಸಲು ಎರಡು ಶಕ್ತಿಗಳು ಒಂದುಗೂಡಿವೆ. ಇದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಚಿಂತನೆ ಕಾಂಗ್ರೆಸ್ ಪಕ್ಷದ್ದಾದರೆ, ದೈಹಿಕ ಚಿಂತನೆ ಎಸ್‍ಡಿಪಿಐಯದು. ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆಯನ್ನು ಸೃಷ್ಟಿಸಿವೆ. ಕಾಂಗ್ರೆಸ್‍ಗೆ ಹಿಜಾಬ್ ವಿಚಾರದಲ್ಲಿ ನಷ್ಟ ಆಗುವ ಅರಿವಾಗಿ ಅದು ಆತಂಕಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಿದರು.
ಸಿಎಎ ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸಿದೆ. ಸದನದಲ್ಲಿ ಚರ್ಚೆ ಮಾಡಬೇಕಿದ್ದ ವಿರೋಧ ಪಕ್ಷವಾದ ಕಾಂಗ್ರೆಸ್, ಧರಣಿ ಮೂಲಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದರು.

 

Share Post