BengaluruNationalPolitics

ಪ್ರಶಾಂತ್‌ ಕಿಶೋರ್‌ ಬೆಂಗಳೂರಿನಲ್ಲಿ ನಡೆಸಿದ ರಹಸ್ಯ ತಂತ್ರಗಾರಿಕೆ ಏನು..?

ಬೆಂಗಳೂರು: ಚುನಾವಣಾ ತಂತ್ರಗಾರಿಕೆಗೆ ಹೆಸರಾಗಿರುವ ಪ್ರಶಾಂತ್‌ ಕಿಶೋರ್‌ ಇಂದು ಮುಂಜಾನೆ ದಿಢೀರ್‌ ಅಂತ ಬೆಂಗಳೂರಿಗೆ ಆಗಮಿಸಿದ್ದರು. ಯಾವುದೇ ಪೂರ್ವ ನಿಗದಿತ ಕಾರ್ಯಕ್ರಮಗಳಿಲ್ಲದಿದ್ದರೂ, ಪ್ರಶಾಂತ್‌ ಕಿಶೋರ್‌ ಬೆಂಗಳೂರಿಗೆ ಬಂದುಹೋಗಿದ್ದಕ್ಕೆ ರಾಜ್ಯ ರಾಜಕೀಯ ವಲಯದಲ್ಲಿ ಹಲವು ರೆಕ್ಕೆಪುಕ್ಕ ಬಂದಿದೆ.

ಪ್ರಶಾಂತ್‌ ಕಿಶೋರ್‌ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರನ್ನು ಭೇಟಿ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದರು. ಯಡಿಯೂರಪ್ಪ ಹೊಸ ಪಕ್ಷ ಕಟ್ಟುವ ಬಗ್ಗೆ ಚರ್ಚೆ ನಡೆಸಲು ಪ್ರಶಾಂತ್‌ ಕಿಶೋರ್‌ರನ್ನು ಕರೆಸಿಕೊಂಡಿದ್ದಾರೆ ಎಂಬ ಊಹಾಪೋಹದ ವರದಿಗಳು ಪ್ರಕಟವಾಗಿದ್ದವು. ಆದರೆ ಇದೆಲ್ಲಾ ನಿಜವಲ್ಲ ಅನ್ನೋದು ಕೆಲವೇ ಕ್ಷಣಗಳಲ್ಲಿ ಸಾಬೀತಾಯ್ತು. ಅಂದಹಾಗೆ, ಪ್ರಶಾಂತ್‌ ಕಿಶೋರ್‌ ಇಂದು ಮುಂಜಾನೆಯಿಂದ ಸಂಜೆಯವರೆಗೆ ಬೆಂಗಳೂರಿನಲ್ಲಿಯೇ ಇದ್ದರೂ, ಯಾವುದೇ ಪ್ರಮುಖರನ್ನು ಭೇಟಿಯಾಗಿದ್ದರ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ.
ಕೆಲ ಮಾಹಿತಿ ಪ್ರಕಾಶ ಗೋವಾ ಚುನಾವಣೆ ಕುರಿತಂತೆ ಕೆಲ ನಾಯಕರ ಜೊತೆ ಚರ್ಚೆ ನಡೆಸಲು ಪ್ರಶಾಂತ್‌ ಕಿಶೋರ್‌ ಬೆಂಗಳೂರಿಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಪರ್ಯಾಯವಾಗಿ ಟಿಎಂಸಿ ಪಕ್ಷವನ್ನು ಬೆಳೆಸಲು ಪ್ರಶಾಂತ್‌ ಕಿಶೋರ್‌ ಕೂಡಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಅವರು ಬೆಂಗಳೂರಿಗೆ ಬಂದಿದ್ದರು ಎಂಬ ಮಾತುಗಳೂ ಕೇಳಿಬರುತ್ತಿವೆ.

 

ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಟಿಎಂಸಿ ಪಕ್ಷ ಕಾಂಗ್ರೆಸ್‌ ನಾಯಕರನ್ನು ಸೆಳೆಯುತ್ತಿದೆ. ಅದರ ಭಾಗವಾಗಿ ರಾಜ್ಯದಲ್ಲೂ ಕಾಂಗ್ರೆಸ್‌ ನಾಯಕರನ್ನು ಟಿಎಂಸಿಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿಯೇ ಪ್ರಶಾಂತ್‌ ಕಿಶೋರ್‌ ಬೆಂಗಳೂರಿಗೆ ಬಂದು ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾರೆ  ಎನ್ನಲಾಗಿದೆ. ಆದರೆ, ಮಾಹಿತಿ ಪ್ರಕಾರ ಪ್ರಶಾಂತ್‌ ಕಿಶೋರ್‌ ಯಾರನ್ನೂ ಭೇಟಿ ಮಾಡಿಲ್ಲ.

ಇನ್ನೊಂದು ಮೂಲದ ಪ್ರಕಾರ ಜೆಡಿಎಸ್‌ ಪಕ್ಷ ರಾಷ್ಟ್ರ ಮಟ್ಟದಲ್ಲಿ ಟಿಎಂಸಿ ಜೊತೆ ನಿಲ್ಲಬೇಕೆಂದು ದೇವೇಗೌಡರಿಗೆ ಮನವಿ ಮಾಡಲು ಪ್ರಶಾಂತ್‌ ಕಿಶೋರ್‌ ಬಂದಿದ್ದರು ಎಂದು ಹೇಳಲಾಗಿದೆ. ಆದ್ರೆ, ಇವೆಲ್ಲವೂ ಊಹಾಪೋಹಗಳೇ ನಿಜ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಆದ್ರೆ ಮುಂಜಾನೆ ಬಂದು ಸಂಜೆ ೩ ಗಂಟೆ ನಂತರ ದೆಹಲಿಗೆ ಹೊರಟಿದ್ದಂತೂ ಸತ್ಯ.

Share Post