ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ; ಲಾಠಿ ಚಾರ್ಜ್
ಮಂಡ್ಯ; ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ 15 ಕ್ಕೂ ಹೆಚ್ಚು ಹಳ್ಳಿಗಳ ಜನರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಹನಕೆರೆ ಬಳಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಗ್ರಾಮಸ್ಥರ ಪ್ರತಿಭಟನೆಗೆ ರೈತ ಸಂಘಗಳು ಸಾಥ್ ನೀಡಿದ್ದರಿಂದ ನೂರಾರು ಜನರು ಸೇರಿದ್ದರು.
ಮೇಲ್ಸೆತುವೆ ನಿರ್ಮಾಣ ಆಗುವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಇದರಿಂದ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿದ್ದು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಪೊಲೀಸರು ಪ್ರತಿಭಟನಾ ಕಾರರನ್ನ ಬಲವಂತವಾಗಿ ತೆರವುಗೊಳಿಸಿದ್ದಾರೆ.
ಹನಕೆರೆ ಗ್ರಾಮದ ಹೊರವಲಯದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾಮದ ಹೊರವಲಯದಲ್ಲಿ ಅಂಡರ್ ಪಾಸ್ ಇರುವುದರಿಂದ ದರೊಡೆ, ಸರಗಳ್ಳತನ, ಅನೈತಿಕ ಚಟುವಟಿಕೆಗಳ ತಾಣವಾಗಲಿದ್ದು ಗ್ರಾಮದ ಮಹಿಳೆಯರು, ಶಾಲಾ ಮಕ್ಕಳು ಆತಂಕದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಆದ್ದರಿಂದ ಇದೆ ಸ್ಥಳದಲ್ಲಿ ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.