ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಸಿದ್ಧತೆ ಪೂರ್ಣ; ಡಿ.ಕೆ.ಶಿವಕುಮಾರ್
ಬೆಂಗಳೂರು; ರಾಷ್ಟ್ರದ ಐಕ್ಯತೆಗಾಗಿ ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆಯನ್ನು ಯಶಸ್ವಿಯಾಗಿಸಲು ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ದಿನ 25 ಕಿ.ಮೀ.ನಂತೆ ಮಧ್ಯ ಕರ್ನಾಟಕದಲ್ಲಿ ಪಾದಯಾತ್ರೆ 21 ದಿನ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಯುತ್ತದೆ. ದೇಶದ ಐಕ್ಯತೆಗಾಗಿ ನಡೆಯುತ್ತಿರುವ ಯಾತ್ರೆಯಲ್ಲಿ ರಾಹುಲ್ ಗಾಂಧಿ ನಾಯಕತ್ವ ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಅತ್ಯಂತ ವ್ಯವಸ್ಥಿತವಾಗಿ ಪಾದಯಾತ್ರೆ ನಡೆಯಲಿದ್ದು, ರಾಜ್ಯದಲ್ಲಿ ಯಶಸ್ವಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ದೇಶದಲ್ಲಿ ಶಾಂತಿಯ ತೋಟ ನಿರ್ಮಾಣವಾಗಬೇಕು ಎಂಬುದು ಗಾಂಧಿ ಆಶಯ. ಇದನ್ನು ಈಡೇರಿಸುವುದು ಸಹ ನಮ್ಮ ಪಾದಯಾತ್ರೆಯ ಉದ್ದೇಶ. ಪ್ರತಿಯೊಬ್ಬ ನಾಗರಿಕರಿಗೂ ಮಾನಸಿಕ ಶಕ್ತಿ ತುಂಬುವುದು, ಸಾಮಾಜಿಕ ಬದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳುವುದು, ಉದ್ಯೋಗ ಕಳೆದುಕೊಳ್ಳುತ್ತಿರುವ ಯುವಕರಿಗೆ ನ್ಯಾಯ ಒದಗಿಸುವುದು, ರಾಜ್ಯ ಮತ್ತು ರಾಷ್ಟ್ರದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಮಾಡುವುದು ನಮ್ಮ ಪ್ರಮುಖ ವಿಚಾರವಾಗಿದೆ. ರೈತನ ಬದುಕು ಹಸನಾಗಬೇಕು ಅವನು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಸಮಾಜದ ಪ್ರತಿಯೊಬ್ಬರ ಬದುಕನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸರ್ವರಿಗೂ ಸಮ ಬಾಳು ಸಮ ಪಾಲು ಮಂತ್ರವನ್ನು ಜಪಿಸುತ್ತೇವೆ. ರಾಜ್ಯದ ಎಲ್ಲಾ ನಾಯಕರು ದಿಲ್ಲಿಯಲ್ಲಿ ಕುಳಿತು ಚರ್ಚಿಸಿ ಈ ಎಲ್ಲ ಯೋಜನೆಗಳ ಕುರಿತು ನಿರ್ಧಾರ ಕೈಗೊಂಡಿದ್ದೇವೆ ಎಂದು ವಿವರಿಸಿದರು.