BengaluruCrime

ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಐವರು ಅಧಿಕಾರಿಗಳ ಅಮಾನತು!

ಬೆಂಗಳೂರು;  ಕಾಡುಗೋಡಿ ಉಪವಿಭಾಗದಲ್ಲಿ ಭಾನುವಾರ ಬೆಳಗಿನ ಜಾವ  ಕೆಳಗೆ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇಬ್ಬರು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

ಮಾರಣಾಂತಿಕ ವಿದ್ಯುತ್ ಅಪಘಾತದಲ್ಲಿ, ಸೌಂದರ್ಯ (23) ಮತ್ತು ಅವರ ಮಗಳು ಲೀಲಾ ಅವರು ಹೋಪ್ ಫಾರ್ಮ್ ಸಿಗ್ನಲ್ ಕಾಲುದಾರಿಯಲ್ಲಿ ಬಿದ್ದ ಲೈವ್ 11 ಕೆವಿ ತಂತಿಯನ್ನು ತುಳಿದಿದ್ದರಿಂದ ಭಾನುವಾರ ಬೆಳಿಗ್ಗೆ 5.30 ರ ಸುಮಾರಿಗೆ ಸಾವನ್ನಪ್ಪಿದ್ದರು. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ವಿದ್ಯುತ್ ಅವಘಡವನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇಂಧನ ಸಚಿವರ ನಿರ್ದೇಶನದ ನಂತರ, ಬೆಸ್ಕಾಂನ ಆಡಳಿತ ಮತ್ತು ಮಾನವ ಸಂಪನ್ಮೂಲ ಜನರಲ್ ಮ್ಯಾನೇಜರ್ ಅಮಾನತುಗೊಳಿಸಲಾಗಿದೆ. ಇ-4 ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಹ್ಮಣ್ಯ ಟಿ, ಇ-4 ಉಪವಿಭಾಗದ ಸಹಾಯಕ ಎಂಜಿನಿಯರ್, ಚೇತನ್ ಎಸ್. ಇ-4 ಸು-ವಿಭಾಗದ ರಾಜಣ್ಣ, ಜ್ಯೂನಿಯರ್ ಪವರ್‌ಮ್ಯಾನ್ ಮಂಜುನಾಥ್ ರೇವಣ್ಣ ಮತ್ತು ಲೈನ್‌ಮ್ಯಾನ್ ಬಸವರಾಜು ಅವರು ಕರ್ತವ್ಯಲೋಪ ಎಸಗಿದ್ದು, ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಬೆಸ್ಕಾಂ ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಬಾಬು ಮತ್ತು ವೈಟ್‌ಫೀಲ್ಡ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀರಾಮು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿದೆ.

Share Post