BengaluruPolitics

Modi Show; ಬೆಂಗಳೂರಲ್ಲಿ ಒಂದಲ್ಲ, ಎರಡು ದಿನ ಮೋದಿ ರೋಡ್‌ ಶೋ; ಏನಿದು ಲೆಕ್ಕಾಚಾರ..?

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ ಶೈಲಿಯಲ್ಲಿ ಇದೇ ಶನಿವಾರ ಬೆಂಗಳೂರಿನಲ್ಲಿ ಬೃಹತ್‌ ರೋಡ್‌ ಶೋ ಹಮ್ಮಿಕೊಂಡಿದ್ದರು. ಸುಮಾರು 40 ಕಿಲೋ ಮೀಟರ್‌ ರೋಡ್‌ ಶೋ ನಡೆಸಲು ಸಿದ್ಧತೆ ನಡೆಸಿದ್ದರು. ಬೆಳಗ್ಗೆ 8.5 ಕಿಲೋ ಮೀಟರ್‌ ಹಾಗೂ ಮಧ್ಯಾಹ್ನ 29.5 ಕಿಲೋ ಮೀಟರ್‌ ರೋಡ್‌ ಶೋಗೆ ರೂಟ್‌ ಮ್ಯಾಪ್‌ ಕೂಡಾ ಸಿದ್ಧವಾಗಿತ್ತು. ಆದ್ರೆ ಇದೀಗ ಮೋದಿ ರೂಟ್‌ ಮ್ಯಾಪ್‌ ಸೇರಿ ಹಲವು ಬದಲಾವಣೆಗಳಾಗಿವೆ. ಮೋದಿಯವರು ಒಂದು ದಿನದ ಬದಲಾಗಿ ಶನಿವಾರ ಹಾಗೂ ಭಾನುವಾರ ಎರಡೂ ದಿನ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೊಸ ರೂಟ್‌ ಮ್ಯಾಪ್‌ ಸಿದ್ಧ ಮಾಡಲಾಗಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸುಮಾರು ನಾಲ್ಕು ಕಿಲೋ ಮೀಟರ್‌ನಷ್ಟು ರೋಡ್‌ ಶೋ ನಡೆಸಿದ್ದರು. ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೂ ಟ್ರಾಫಿಕ್‌ ಜಾಮ್‌ ಆಗಿ ಸುಮಾರು ಜನ ಪರದಾಡಿದ್ದರು. ಇನ್ನು ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಆಗಾಗ ಮಳೆಯಾಗುತ್ತಿದೆ. ಇದೆಲ್ಲಾ ಗಮನದಲ್ಲಿಟ್ಟುಕೊಂಡು ಮೋದಿ ರೋಡ್‌ ಶೋವನ್ನು ಒಂದು ದಿನದ ಬದಲಾಗಿ ಎರಡು ದಿನ ನಡೆಸಲು ತೀರ್ಮಾನ ಮಾಡಲಾಗಿದೆ.

ಸಂಜೆ ವೇಳೆ ಬೆಂಗಳೂರಿನಲ್ಲಿ ವಾನಹ ಓಡಾಟ ಜಾಸ್ತಿ ಇರುತ್ತದೆ. ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ಹೋಗುವವರ ಸಂಖ್ಯೆ ಜಾಸ್ತಿ ಇರುತ್ತದೆ. ಇನ್ನು ಇದೇ ಸಮಯದಲ್ಲಿ ಮಳೆ ಕೂಡಾ ಬರುತ್ತಿದೆ. ಇದರ ನಡುವೆ ರೋಡ್‌ ಶೋ ಕೂಡಾ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ರೋಡ್‌ ಶೋ ಎರಡು ದಿನ ಮಾಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮೊದಲು ಮೇ ಆರರ ಶನಿವಾರ ಬೆಳಗ್ಗೆ ಹಾಗೂ ಸಂಜೆ ಎರಡು ಹಂತದಲ್ಲಿ ರೋಡ್‌ ಶೋ ನಡೆಸಲು ತೀರ್ಮಾನಿಸಲಾಗಿದೆ. ಆದ್ರೆ, ಈಗ ಶನಿವಾರ ಬೆಳಗ್ಗೆ ಮಾತ್ರ ಮೋದಿ ರೋಡ್‌ ಶೋ ನಡೆಸಲಿದ್ದಾರೆ. ಮಧ್ಯಾಹ್ನದ ನಂತರ ನಡೆಯಬೇಕಿದ್ದ ರೋಡ್‌ ಶೋವನ್ನು ಭಾನುವಾರ ಬೆಳಗ್ಗೆ ನಡೆಸಲಿದ್ದಾರೆ. ಇದರಿಂದಾಗಿ ಮಳೆಯಿಂದಲೂ ತಪ್ಪಿಸಿಕೊಳ್ಳಬಹುದು. ಟ್ರಾಫಿಕ್‌ ಕಿರಿಕಿರಿಯಿಂದಲೂ ಜನರಿಗೆ ಮುಕ್ತಿ ದೊರಕಿಸಿಕೊಡಬಹುದು ಅನ್ನೋದು ಲೆಕ್ಕಾಚಾರ.

ಇಂದು ಮಧ್ಯಾಹ್ನ ಈ ಬಗ್ಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಎರಡು ದಿನ ರೋಡ್‌ ಶೋ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಹೊಸ ತೀರ್ಮಾನದಂತೆ ಶನಿವಾರ 10.1 ಕಿಲೋ ಮೀಟರ್‌ ರೋಡ್ ಶೋ ನಡೆಯಲಿದೆ. ಭಾನುವಾರ ಬೆಳಗ್ಗೆ ಒಟ್ಟು 28.5 ಕಿ.ಮೀ ರೋಡ್ ಶೋ ನಡೆಯುವ ಸಾಧ್ಯತೆಯಿದೆ.

Share Post