BengaluruPolitics

Bhajrangdal Issue; ಬಜರಂಗದಳಕ್ಕೆ ಅಮಿತ್‌ ಶಾ ಮಗನನ್ನು ಸೇರಿಸಲಿ; ಕಾಂಗ್ರೆಸ್‌

ಬೆಂಗಳೂರು; ಒಂದು ವೇಳೆ ಬಜರಂಗದಳ ಒಳ್ಳೆಯ ಸಂಘಟನೆಯಾಗಿದ್ದರೆ, ಕೇಂದ್ರ ಗೃಹಸಚಿವ ತಮ್ಮ ಮಗನನ್ನು ಬಿಸಿಸಿಐ ಹುದ್ದೆಗೆ ರಾಜೀನಾಮೆ ಕೊಡಿಸಿ, ಬಜರಂಗದಳ ರಾಷ್ಟ್ರಾಧ್ಯಕ್ಷ ಮಾಡಲಿ, ಸಿಎಂ ಬೊಮ್ಮಾಯಿಯವರು ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ ಎಂದು ಕಾಂಗ್ರೆಸ್‌ ಆಗ್ರಹ ಮಾಡಿದೆ. ಈ ಬಗ್ಗೆ ಕಾಂಗ್ರೆಸ್‌ ಸರಣಿ ಟ್ವೀಟ್‌ ಮಾಡಿದ್ದು, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.

ನಾವು ಸಮಾಜದ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇವೆ. ದೇವರು ಹೆಸರಿಟ್ಟುಕೊಂಡು ತಪ್ಪು ಮಾಡಿದರೆ ಸುಮ್ಮನೆ ಇರೋದಕ್ಕೆ ಆಗುತ್ತದೆಯೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಸಂಘಟನೆಗಳನ್ನು ಬಳಸಿಕೊಳ್ಳುತ್ತವೆ. ಬಡವರು, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿಕೊಂಡು ಕೋರ್ಟ್‌, ಕಚೇರಿ ಅಲೆಯುವಂತೆ ಮಾಡುತ್ತವೆ. ಬಿಜೆಪಿ ನಾಯಕರು ಯಾಕೆ ತಮ್ಮ ಮಕ್ಕಳನ್ನು ಇಂತಹ ಸಂಘಟನೆಗಳಲ್ಲಿ ಸೇರಿಸೋದಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಕಾಂಗ್ರೆಸ್‌ ಸರಣಿ ಟ್ವೀಟ್‌ಗಳಲ್ಲೇನಿದೆ..?

ʻಬಜರಂಗದಳದ ಬಗ್ಗೆ ಬಹಳ ಮಾತನಾಡುವ ಬಿಜೆಪಿ (BJP) ನಾಯಕರಿಗೆ ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನಿಟ್ಟಿದೆ. ಸಿಟಿ ರವಿ ಮಕ್ಕಳು ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್ ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಸ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯಿ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ?ʼ

ʻಬಜರಂಗದಳ ಬಿಜೆಪಿಯ ಅಂಗ ಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ಏಕೆ ನೀಡಿಲ್ಲ?ʼ

ಹೀಗಂತ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

Share Post