BengaluruPolitics

ವಿಧಾನಪರಿಷತ್‌ ಚುನಾವಣೆ; ನಾಲ್ಕು ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ

ಬೆಂಗಳೂರು; ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆದ ಚುಣಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ.  2 ಶಿಕ್ಷಕ ಕ್ಷೇತ್ರಗಳು, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ. ಮೂರು ಪಕ್ಷಗಳು ಸೇರಿ ಒಟ್ಟು 49 ಅಭ್ಯರ್ಥಿಗಳ ಭವಿಷ್ಯ ಸಂಜೆಯೊಳಗೆ ಗೊತ್ತಾಗಲಿದೆ.

ಪ್ರಾಶಸ್ತ್ಯದ ಆಧಾರದ ಮೇಲೆ ಮತದಾನ ನಡೆದಿರುವ ಹಿನ್ನೆಲೆಯಿರುವುದರಿಂದ ಫಲಿತಾಂಶ ಹೊರಬೀಳಲು ಹೆಚ್ಚಿನ ಸಮಯ ಪಡೆಯುವ ಸಾಧ್ಯತೆಯಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರ ಪೈಕಿ 65,914 ಮತ ಚಲಾವಣೆ ಆಗಿದ್ದರೆ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 66.18ರಷ್ಟು ಮತದಾನವಾಗಿತ್ತು.

ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮಧ್ಯೆ ಪೈಪೋಟಿಯಿದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,386 ಮತದಾರರ ಪೈಕಿ 21,401 ಮತ ಚಲಾವಣೆ ಆಗಿದ್ದು, 84.30%ರಷ್ಟು ಮತದಾನವಾಗಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,973 ಮತದಾರರ ಪೈಕಿ 15,577 ಮತ ಚಲಾವಣೆ ಆಗಿದ್ದು, 86.67%ರಷ್ಟು ಮತದಾನವಾಗಿತ್ತು.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳು ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬಂದರೆ,  ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ವಾಯವ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳು ಬರುತ್ತವೆ. ದಕ್ಷಿಣ ಪದವೀಧರ ಕ್ಷೇತದಲ್ಲಿ ಕಾಂಗ್ರೆಸ್ ಗೆಲುವಿನ ಆಸೆಯಲ್ಲಿದೆ, ಜೆಡಿಎಸ್ ಸ್ಥಾನ ಉಳಿಸಿಕೊಳ್ಳಲು ಹರಸಾಹಸಪಟ್ಟಿದೆ, ಬಿಜೆಪಿ ಮರಳಿ ಕ್ಷೇತ್ರ ಪಡೆಯಲು ಹವಣಿಸುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಭವಿಷ್ಯವೂ ನಿರ್ಧಾರವಾಗಲಿದೆ.

ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪರ ಹಣ ಹಂಚಿಕೆಯೂ ಜೋರಾಗಿತ್ತು. ಬೆಳಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಿದ್ದು, ಎಣಿಕೆ ಕೇಂದ್ರಗಳ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆಗಾಗಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಆಗಿದೆ.

 

Share Post