ನ್ಯಾಷನಲ್ ಹೆರಾಲ್ಡ್ ಕೇಸ್; ಮೂರನೇ ದಿನವೂ ರಾಹುಲ್ ವಿಚಾರಣೆ
ನವದೆಹಲಿ; ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಎರಡು ದಿನ ವಿಚಾರಣೆ ಎದುರಿಸಿದ್ದಾರೆ. ಎರಡು ದಿನಗಳಲ್ಲಿ ಒಟ್ಟು 20 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಆದ್ರೆ ಇನ್ನೂ ಅವರ ವಿಚಾರಣೆ ಮುಗಿದಂತೆ ಕಾಣುತ್ತಿಲ್ಲ. ಇವತ್ತೂ ಕೂಡಾ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ಮೂರನೇ ಬಾರಿ ವಿಚಾರಣೆ ಎದುರಿಸಲಿದ್ದಾರೆ.
ಸೋಮವಾರ ಹತ್ತು ಗಂಟೆ ಕಾಲ ವಿಚಾರಣೆ ಮಾಡಲಾಗಿತ್ತು. ನಿನ್ನೆ ಒಟ್ಟು ಒಂಬತ್ತು ಗಂಟೆ ಕಾಲ ವಿಚಾರಿಸಲಾಯಿತು. ಮೊದಲ ದಿನ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದರು. ಯಂಗ್ ಇಂಡಿಯಾ ಮಾಡಿರುವ ಸಾಲಗಳ ಬಗ್ಗೆ ದಾಖಲೆಗಳನ್ನು ತರುವಂತೆ ಸೂಚಿಸಲಾಗಿತ್ತು. ಹೀಗಾಗಿ ಎರಡನೇ ದಿನವಾದ ನಿನ್ನೆ ರಾಹುಲ್ ಗಾಂಧಿಯವರು ಆ ಸಂಬಂಧ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಒದಗಿಸಿದ್ದರು. ಆ ದಾಖಲೆಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದರು.
ಈ ಎರಡು ದಿನಗಳ ವಿಚಾರಣೆಯಲ್ಲಿ ಹತ್ತಾರು ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಅದೆಲ್ಲವನ್ನೂ ಇಡಿ ಅಧಿಕಾರಿಗಳು ಲಿಖಿತ ರೂಪದಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಈವರೆಗೂ ಐವತ್ತು ಪುಟಗಳ ಹೇಳಿಕೆ ನೀಡಿದ್ದು, ಎಲ್ಲ ಪುಟಗಳ ಮೇಲೆ ಇಡಿ ಅಧಿಕಾರಿಗಳು ರಾಹುಲ್ ಗಾಂಧಿರಿಂದ ಸಹಿ ಮಾಡಿಸಿಕೊಂಡಿದ್ದಾರೆ.