ಮೆಟ್ರೋದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ; ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶ
ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ನಿವೃತ್ತ ಮುಖ್ಯೋಪಾದ್ಯಾಯರೊಬ್ಬರು ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಈ ಘಟನೆಯ ನೆನಪು ಮಾಸುವ ಮುನ್ನವೇ ಈ ಮೆಟ್ರೋ ರೈಲಿನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ. ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೆಟ್ರೋ ರೈಲಿನಲ್ಲಿ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಮೊದಲಿಗೆ ಯುವತಿ ಈ ವಿಚಾರ ಗೊತ್ತಾಗಿಲ್ಲ. ಆಕೆಗೆ ಮನವರಿಕೆಯಾದ ಮೇಲೆ ಅಕ್ಕಪಕ್ಕದವರಿಗೆ ಹೇಳಿದರೂ ಯಾರೂ ಕೂಡಾ ಸಹಾಯಕ್ಕೆ ಬಂದಿಲ್ಲ. ಯುವತಿ ಕಿರುಚಾಡಿದರೂ ಕೂಡಾ ಯಾರೂ ಆಕೆಯ ನೆರವಿಗೆ ಬಂದಿಲ್ಲ.
ಪ್ರಯಾಣ ಮುಗಿದ ನಂತರ ಯುವತಿ ತನ್ನ ಸ್ನೇಹಿತರಿಗೆ ವಿಷಯ ಹೇಳಿಕೊಂಡಿದ್ದಾಳೆ. ಅನಂತರ, ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಕೂಡಾ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ನ.20ರ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, ಈ ಬಗ್ಗೆ ಇದುವರೆಗೂ ನಮಗೆ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.