CrimeDistricts

ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬೀಗ ಜಡಿಯಲು ಆದೇಶ

ಮೈಸೂರು; ರೋಗಿಯೊಬ್ಬರ ಸಾವಿಗೆ ಕಾರಣವಾದ ಹಾಗೂ ವಿದ್ಯಾರ್ಹತೆ ಇಲ್ಲದವರನ್ನು ಅನಧಿಕೃತವಾಗಿ ನೇಮಕ ಮಾಡಿಕೊಂಡಿರುವ ಕಾರಣದಿಂದಾಗಿ ಮೈಸೂರಿನ ಪ್ರತಿಷ್ಠಿ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ಬೀಗ ಜಡಿಯುವಂತೆ ಆದೇಶ ಹೊರಡಿಸಲಾಗಿದೆ. ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿ, ಮೈಸೂರಿನ ಗೋಕುಲಂನಲ್ಲಿರುವ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ಬೀಗ ಹಾಕುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಕುಮಾರಸ್ವಾಮಿ ಆದೇಶ ಮಾಡಿದ್ದಾರೆ.

ಜೊತೆಗೆ ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಲಾಗಿದೆ. 2013ರ ಜುಲೈನಲ್ಲಿ ಮೈಸೂರಿನ ಯಾದವಗಿರಿಯ ನಿವಾಸಿ ಬಿ.ಶಿವಣ್ಣ ಎಂಬುವವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ವೈದ್ಯ ಡಾ.ಚಂದ್ರಶೇಖರ್‌ ನಿರ್ಲಕ್ಷ್ಯದಿಂದಲೇ ಶಿವಣ್ಣ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಸಂಬಂಧ ರವಿಗೌಡ ಎಂಬುವವರು, ಡಿಸೆಂಬರ್ 16, 2021 ರಂದು ಆಸ್ಪತ್ರೆ ಹಾಗು ವೈದ್ಯರ ವಿರುದ್ಧ ಆರೋಗ್ಯ ಇಲಾಖೆಯ ಜಾಗೃತಕೋಶದ ಜಾಗೃತಾಧಿಕಾರಿಗೆ ದೂರು ನೀಡಿದ್ದರು. ಜೊತೆಗೆ ಕೋರ್ಟ್‌ನಲ್ಲಿ ಕೂಡಾ ದಾವೆ ಹೂಡಲಾಗಿತ್ತು.

ತನಿಖೆ ವೇಳೆ ವೈದ್ಯ ಚಂದ್ರಶೇಖರ್‌ ಐದು ಲೋಪ ಎಸಗಿರುವುದು ಬಯಲಾಗಿತ್ತು. ಡಾ.ಚಂದ್ರಶೇಖರ್‌ ಅವರು ಅನಸ್ತೇಷಿಯಾ ವೈದ್ಯರಲ್ಲದಿದ್ದರೂ ಅನಸ್ತೇಷಿಯಾ ನೀಡಿದ್ದಾರೆ. ಅವಿದ್ಯಾವಂತ ನರ್ಸಿಂಗ್‌ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಜೊತೆಗೆ ಅನಧಿಕೃತವಾಗಿ ಬಿಎಎಂಎಸ್‌ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

Share Post