ಸಂವಿಧಾನ ಪರ ಸಂವಿಧಾನ ವಿರುದ್ಧದ ಹೋರಾಟ-ಡಿ.ಕೆ.ಶಿವಕುಮಾರ್
ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯುಕರಲ್ಲಿ ಕಿಚ್ಚಿನ ಭಾವನೆ ಮೂಡಿಸುವ ಮಾತುಗಳನ್ನಾಡಿದ್ದಾರೆ. ಈಗ ದೇಶದಲ್ಲಿ ಒಂದು ವಿಚಾರದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ನಾನು ಯುವ ಕಾಂಗ್ರೆಸ್ ತಂಡಕ್ಕೆ ಒಂದು ಸಂದೇಶ ನೀಡುತ್ತೇನೆ. ಈ ದೇಶದಲ್ಲಿ ಉದ್ಭವಿಸಿರುವ ಪರಿಸ್ಥಿತಿ, ನೆಹರೂ ಅವರಿದ್ದಾಗ ದೇಶವನ್ನು ಹೇಗೆ ಕಟ್ಟಲಾಯಿತು, 75 ವರ್ಷಗಳ ಇತಿಹಾಸವೇನು, ಕಳೆದ ಏಳೂವರೇ ವರ್ಷಗಳ ಇತಿಹಾಸವೇನು ಎಂಬ ಬಗ್ಗೆ ಚರ್ಚೆ ಆರಂಭಿಸಿ. ಇದು ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟವಲ್ಲ. ಇದು ಸಂವಿಧಾನ ಪರ ಹಾಗೂ ಸಂವಿಧಾನ ವಿರುದ್ಧದ ನಡುವಣ ಹೋರಾಟ. ಸಂವಿಧಾನ ಉಳಿಸಿಕೊಳ್ಳುವುದು ಬೆಳೆಸುವುದು ಮುಖ್ಯ. ಕೇವಲ ಭಾವನೆಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಈ ಬಗ್ಗೆ ಚಿಂತನೆ ಮಾಡಬೇಕು.
ನಾನು ಅನೇಕ ಭಾಷಣಗಳಲ್ಲಿ ಹೇಳಿದ್ದೇನೆ. ಹಿಂದೆ 21 ವರ್ಷದವರಿಗೆ ಮಾತ್ರ ಮತದಾನದ ಹಕ್ಕಿತ್ತು. ರಾಜೀವ್ ಗಾಂಧಿ ಅವರು ಅದನ್ನು 18 ವರ್ಷಕ್ಕೆ ಇಳಿಸಿದರು. ಈ ಬಗ್ಗೆ ವಿರೋಧ ಪಕ್ಷಗಳಿಂದ ಸಂಸತ್ತಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆಗ ರಾಜೀವ್ ಗಾಂಧಿ ಅವರು, ನನಗೆ ಈ ಯುವಕರ ಮೇಲೆ ನಂಬಿಕೆ ಇದೆ. 16 ವರ್ಷದ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುತ್ತೇವೆ. ದೇಶ ಕಾಯಲು ಬಂದೂಕು ನೀಡುತ್ತೇವೆ. ಹೀಗಿರುವಾಗ ದೇಶದ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ನೀಡುವುದರಲ್ಲಿ, ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರ ಆಯ್ಕೆ ಮಾಡುವಲ್ಲಿ 18 ವರ್ಷದ ಯುವಕರಿಗೆ ಅವಕಾಶ ನೀಡುವುದರಲ್ಲಿ ತಪ್ಪೇನಿದೆ? ನನಗೆ ಅವರ ಮೇಲೆ ನಂಬಿಕೆ ಇದೆ ಎಂದಿದ್ದರು.
ಬಿಜೆಪಿ ಸ್ನೇಹಿತರು ಯುವಕರನ್ನು ಬೇರೆ ದಾರಿಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮದೇ ವಿದ್ಯಾಸಂಸ್ಥೆಗಳ ಮೂಲಕ ಅವರ ತಲೆಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಎನ್ಇಪಿ ರಾಷ್ಟ್ರೀಯ ಶಿಕ್ಷಣವಲ್ಲ, ನಾಗ್ಪುರ ಶಿಕ್ಷಣ ನೀತಿ ಎಂದು ಹೇಳಿದ್ದೆ. ರಾಜ್ಯದಲ್ಲಿ ಮೊದಲು ಜಾರಿಗೆ ತರಬೇಕು ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಇದು ಸಾಧ್ಯವಿಲ್ಲ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಇದನ್ನು ಸುಡುವ ಕೆಲಸ ಮಾಡುತ್ತೇವೆ.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಇದು ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲ. ಇಂದು ಜಾತಿ, ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಿ ಜನರ ಮನಸ್ಸು ಹಾಳು ಮಾಡುತ್ತಿದ್ದಾರೆ. ಹೀಗಾಗಿ ನಾನು ಸಿದ್ದರಾಮಯ್ಯನವರು ಚರ್ಚೆ ಮಾಡಿ ಒಂದು ವಾರ ಶಾಲೆ, ಕಾಲೇಜು ಮುಚ್ಚುವಂತೆ ಆಗ್ರಹಿಸಿದೆವು. ಯಾವುದೋ ಒಂದು ಕಾಲೇಜಿನಲ್ಲಿ ವಿವಾದ ಉಂಟಾದಾಗಲೇ ಮುಚ್ಚಿಸಬಹುದಿತ್ತು. ಬಿಜೆಪಿ ಕಾರ್ಯಕರ್ತರು ಲಕ್ಷಾಂತರ ಯುವಕರಿಗೆ ಶಾಲು ಹಂಚಿ ಅವರ ಮನಸ್ಸಿನಲ್ಲಿ ದ್ವೇಷದ ವಿಷ ಬೀಜ ಬಿತ್ತಿ ಇಡೀ ಪ್ರಪಂಚ ರಾಜ್ಯವನ್ನು ನೋಡುವಂತೆ ಮಾಡಿದ್ದಾರೆ.
ಯಶಸ್ಸು ಸಾಧಿಸಬೇಕಾದರೆ ಧರ್ಮರಾಯನ ಧರ್ಮ ಇರಬೇಕು, ಕರ್ಣನ ದಾನತ್ವ, ಅರ್ಜುನನ ಗುರಿ, ವಿಧುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕಂತೆ. ಅದೇ ರೀತಿ ನೀವು ಯಶಸ್ಸು ಸಾಧಿಸಬೇಕಾದರೆ ಅನೇಕ ಗುಣಗಳನ್ನು ರೂಢಿಸಿಕೊಳ್ಳಬೇಕು. ಕೇವಲ ಕೆಲಸದ ಬಗ್ಗೆ ಗಮನಹರಿಸಿ. ಪ್ರತಿ ತಾಲೂಕಿನಲ್ಲಿ 5 ಸಾವಿರ ಹೊಸ ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ನಮ್ಮ ಗುರಿ ವಿಧಾನಸೌಧದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವುದು, ರಾಹುಲ್ ಗಾಂಧಿ ಅವರನ್ನು 2024ರಲ್ಲಿ ಪ್ರಧಾನ ಮಂತ್ರಿಯನ್ನಾಗಿ ಮಾಡುವುದು ಆಗಿರಬೇಕು.