ಚಿಲುಮೆಗೂ ಹೊಂಬಾಳೆಗೂ ಸಂಬಂಧವಿಲ್ಲ ಎಂದ ಸಚಿವ ಅಶ್ವತ್ಥನಾರಾಯಣ
ಬೆಂಗಳೂರು; ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಯಾವ ರೀತಿಯಲ್ಲೂ ಸಂಬಂಧ ಇಲ್ಲ. ಬೇರೆ ಯಾರದರೂ ಹೊಂಬಾಳೆ ಅಂತ ಇಟ್ಟುಕೊಂಡಿದ್ದರೆ ಏನೂ ಮಾಡೋದಕ್ಕೆ ಆಗೋದಿಲ್ಲ. ಆದ್ರೆ ನನ್ನ ಸಹೋದರನಿಗೂ ಚಿಲುಮೆ ಎಂಬ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಉತ್ತರ ನೀಡಿರುವ ಸಚಿವರು, ಹೊಂಬಾಳೆ ಒಂದು ಪ್ರತಿಷ್ಠಿತ ಸಂಸ್ಥೆ. ಇಂತಹ ಕೀಳು ಮಟ್ಟದಲ್ಲಿ ಮಾತಾಡುತ್ತಿರುವವರ ರೇಂಜಿಗೆ ಈ ಸಂಸ್ಥೆ ಇಲ್ಲ. ಇವರಂತೆ ನಮ್ಮ ನಾಡಿಗೆ ಭಾರವಾಗಿಲ್ಲ ಈ ಸಂಸ್ಥೆ. ಕನ್ನಡ ಚಿತ್ರರಂಗ ಹಾಗೂ ನಾಡಿಗೆ ಹೆಸರು ತಂದುಕೊಡುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ನಿರಾಧಾರ ಆರೋಪ ಮಾಡುತ್ತಿದ್ದು, ಅದನ್ನು ನಾನು ಖಂಡನೆ ಮಾಡುತ್ತೇನೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಫೋಟೋ ರಿಲೀಸ್ ಮಾಡಿರುವ ಬಗ್ಗೆ ಮಾತನಾಡಿದ ಸಚಿವರು , ಕೃಷ್ಣಪ್ಪ ಅವರ ಬಗ್ಗೆ ನನಗೆ ಗೊತ್ತು. ಸಾಮಾಜಿಕ ಕಾರ್ಯಕ್ರಮಕ್ಕೆ ಕರೆದಾಗ ನಾನು ಹೋಗಿದ್ದೆ. ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ? ಎಂದು ಪ್ರಶ್ನಿಸಿದ್ದಾರೆ.