ಒಕ್ಕಲಿಗರ ಮೀಸಲಾತಿ ಹೆಚ್ಚಿಸಬೇಕು; ಡಿ.ಕೆ.ಶಿವಕುಮಾರ್ ಆಗ್ರಹ
ಬೆಂಗಳೂರು; ನಮ್ಮ ಜನಸಂಖ್ಯೆ ಆಧಾರದ ಮೇಲೆ ನಾವು ನಮ್ಮ ಸಮಾಜದ ಹಕ್ಕನ್ನು ಕೇಳುತ್ತಿದ್ದೇವೆ. ಈ ಮೀಸಲಾತಿ ಹಾಗೂ ಉದ್ಯೋಗ ನನಗೆ ಬೇಕಾಗಿಲ್ಲದಿರಬಹುದು. ಆದರೆ ನಮ್ಮ ಸಮುದಾಯದವರಿಗೆ ಬೇಕಾಗಿದೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಚುನಾವಣೆಗೆ ಅರ್ಜಿ ಹಾಕುವವರೆಗೂ ನೀವು ಯಾವ ಜಾತಿ ಎಂದು ಕೇಳಲಾಗುತ್ತದೆ. ಹೀಗಾಗಿ ನಾವು ನಮ್ಮ ಜಾತಿಯನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಒಕ್ಕಲಿಗ ಸಮುದಾಯದ ಮೀಸಲಾತಿ ಹೋರಾಟ ಸಭೆಯಲ್ಲಿ ಮಾತನಾಡಿದ ಅವರು, ನಾವು ದೊಡ್ಡ ಹೋರಾಟಕ್ಕೆ ಸಜ್ಜಾಗಬೇಕಿದ್ದು, ಇದರಲ್ಲಿ ಯಶಸ್ಸು ಕಾಣಬೇಕಾದರೆ ಸಂಘಟನೆ ಬೇಕು. ಒಗ್ಗಟ್ಟು ಇಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಾವು ನಮ್ಮ ಸಮಾಜದ ಜನರನ್ನು ಜಾಗೃತರನ್ನಾಗಿ ಮಾಡಬೇಕು. ಹಳ್ಳಿ, ಹಳ್ಳಿಗೆ ಹೋಗಿ ಸಂಘಟನೆ ಮಾಡಬೇಕು. ವಾಸ್ತವ ಅಂಶವನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಈ ವಿಚಾರವಾಗಿ ದೃಢ ಯೋಜನೆ ರೂಪಿಸಿ, ಕೆಲಸ ಮಾಡಬೇಕು. ಈ ಹೋರಾಟದಲ್ಲಿ ನಾನು ಮುಂದೆಯಾದರೂ ಇರಲು ಸಿದ್ದ, ಹಿಂದೆಯಾದರೂ ಇರಲು ಸಿದ್ಧ. ನಿಮಗೆ ಹೇಗೆ ಬೇಕೋ ಆ ರೀತಿ ನನ್ನನ್ನು ಬಳಸಿಕೊಳ್ಳಿ. ಒಟ್ಟಿನಲ್ಲಿ ಈ ಸಮುದಾಯಕ್ಕೆ ಸಿಗಬೇಕಾದ ಹಕ್ಕು ಸಿಗಬೇಕು ಎಂದರು.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ 12ಕ್ಕೆ ಹೆಚ್ಚಳ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಒಕ್ಕಲಿಗರ ಸಂಘದ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಈ ಮಾತುಗಳನ್ನು ಹೇಳಿದ್ದಾರೆ. ಅಧಿಕಾರ ಕೊಡಿ. ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳುವ ಮೂಲಕ ಡಿಕೆಶಿ ಮತ್ತೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.