BengaluruCinemaPolitics

ಸಿದ್ದರಾಮಯ್ಯ ಪರ ಶಿವರಾಜ್‌ ಕುಮಾರ್‌ ಪ್ರಚಾರ; ಕೆಲವರ ಅಪಸ್ವರ ಯಾಕೆ..?

ಬೆಂಗಳೂರು;  ಶಿವರಾಜ್‌ ಕುಮಾರ್‌… ಸರಳತೆಗೆ ಮತ್ತೊಂದು ಹೆಸರು.. ಅಪ್ಪನ ಗುಣಗಳನ್ನೆಲ್ಲಾ ಮೈಗೂಡಿಸಿಕೊಂಡು ಬಂದಿದ್ದಾರೆಂದು ಎಲ್ಲರೂ ಹೇಳುತ್ತಾರೆ… ಅಂದಹಾಗೆ, ರಾಜ್‌ ಕುಟುಂಬಕ್ಕೂ ರಾಜಕೀಯಕ್ಕೂ ಎಣ್ಣೆ ಸೀಗೇಕಾಯಿ ಸಂಬಂಧ… ಬಂಗಾರಪ್ಪ ಮಗಳು ಅನ್ನೋ ಕಾರಣಕ್ಕೆ ಶಿವಣ್ಣನ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಶಿವಮೊಗ್ಗ ಲೋಕಸಭಾ ಅಖಾಡಕ್ಕಿಳಿದಿದ್ದರು… ಆಗಲೇ ಜನ ಇವರಿಗೆ ರಾಜಕೀಯ ಬೇಡವಾಗಿತ್ತು ಎಂದು ಮಾತನಾಡಿದ್ದರು… ಯಾಕಂದ್ರೆ ಕೋಟ್ಯಂತರ ಅಭಿಮಾನಿಗಳು ರಾಜ್‌ ಕುಟುಂಬವನ್ನು ಪಕ್ಷಾತೀತವಾಗಿ ಪ್ರೀತಿಸುತ್ತಾರೆ… ಆದ್ರೆ, ಅನಿವಾರ್ಯ ಕಾರಣಕ್ಕಾಗಿ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ… ಸಹೋದರ ಮಧು ಬಂಗಾರಪ್ಪ ಪರ ಪ್ರಚಾರಕ್ಕಿಳಿದಿದ್ದಾರೆ… ಭಾಮೈದ ಅನ್ನೋ ಕಾರಣಕ್ಕೂ ಶಿವರಾಜ್‌ ಕುಮಾರ್‌ ಕೂಡಾ ಸೊರಬಕ್ಕೆ ಹೋಗಿ ಪ್ರಚಾರ ಮಾಡಿ ಬಂದಿದ್ದರು… ಇಷ್ಟಾಗಿದ್ದರೆ ಸಾಕಾಗಿತ್ತು ಅನಿಸುತ್ತೆ… ಆದ್ರೆ, ಶಿವರಾಜ್‌ ಕುಮಾರ್‌ ನಾನು ರಾಜಕೀಯದಿಂದ ದೂರ ಎನ್ನುತ್ತಲೇ ಹಲವು ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದಾರೆ… ಸಾಗರದಲ್ಲಿ ಬೇಳೂರು ಗೋಪಾಲ ಕೃಷ್ಣ ಪರ ಪ್ರಚಾರ ಮಾಡಿದ್ದ ಶಿವರಾಜ್‌ಕುಮಾರ್‌, ಇದೀಗ ವರುಣಾದಲ್ಲಿ ಸಿದ್ದರಾಮಯ್ಯ ಅವರ ಪ್ರಚಾರ ನಡೆಸಿದ್ದಾರೆ… ಪ್ರಚಾರ ಮಾಡೋದು ಬಿಡೋದು ಅವರವರ ಇಷ್ಟ… ಆದ್ರೆ, ರಾಜ್‌ ಕುಟುಂಬವನ್ನು ಪ್ರೀತಿಸುವ ಹೃದಯಗಳು ಶಿವಣ್ಣನಿಗೆ ಇದು ಬೇಕಿತ್ತಾ ಎಂದು ಮಾತನಾಡೋದಕ್ಕೆ ಶುರು ಮಾಡಿದ್ದಾರೆ…

ಹಾಗೆ ನೋಡಿದರೆ ರಾಜ್‌ ಕುಟುಂಬಕ್ಕೆ ಎಲ್ಲಾ ಪಕ್ಷದ ನಾಯಕರು ಹತ್ತಿರದವರೇ… ಎಲ್ಲರೂ ಇವರ ಕುಟುಂಬವನ್ನು ಪ್ರೀತಿಸುವವರೇ… ರಾಜ್‌ ಮನಸ್ಸು ಮಾಡಿದ್ದರೆ, ನೇರವಾಗಿ ಮುಖ್ಯಮಂತ್ರಿ ಆಗಿಬಿಡಬಹುದಿತ್ತು.. ಆದ್ರೆ ರಾಜ್‌ ರಾಜಕೀಯದಿಂದ ಸಂಪೂರ್ಣವಾಗಿ ದೂರವೇ ಉಳಿದರು… ಗೀತಾ ಶಿವರಾಜ್‌ ಕುಮಾರ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆಗೆ ಸ್ಪರ್ಧೆ ಮಾಡಿದಾಗಲೂ, ರಾಘವೇಂದ್ರ ರಾಜ್‌ ಕುಮಾರ್‌ ಆಗಲಿ, ಪುನೀತ್‌ ರಾಜ್‌ಕುಮಾರ್‌ ಆಗಲಿ ಪ್ರಚಾರಕ್ಕೆ ಹೋಗಿರಲಿಲ್ಲ.. ಪತ್ನಿಯ ಮೇಲಿನ ಪ್ರೀತಿಗಾಗಿ ಅಂದು ಶಿವರಾಜ್‌ಕುಮಾರ್‌ ಪ್ರಚಾರ ನಡೆಸಿದ್ದರು… ಆದ್ರೆ ಈಗ ಶಿವರಾಜ್‌ಕುಮಾರ್‌ ಪೂರ್ತಿಯಾಗಿ ಕಾಂಗ್ರೆಸ್‌ ಪರವಾಗಿಯೇ ಪ್ರಚಾರ ನಡೆಸುತ್ತಿದ್ದಾರೆ… ಹೀಗಾಗಿ ನಮ್ಮ ಪ್ರೀತಿಯ ನಟ ಹೀಗೆ ಒಂದು ಪಕ್ಷಕ್ಕೆ ಸೀಮಿತವಾಗಿಬಿಟ್ಟರಲ್ಲಾ ಅನ್ನೋ ಮಾತುಗಳು ಕೇಳಿಬರುತ್ತಿವೆ…

ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ ಸ್ವತಃ ಸಿಎಂ ಬೊಮ್ಮಾಯಿಯವರು ಸ್ಥಳದಲ್ಲಿಯೇ ಇದ್ದು ಎಲ್ಲಾ ವ್ಯವಸ್ಥೆಯನ್ನೂ ನೋಡಿಕೊಂಡಿದ್ದರು… ಪುನೀತ್‌ ಮೇಲೆ ಅಪಾರ ಪ್ರೀತಿ ತೋರಿಸಿದ್ದರು… ಪುನೀತ್‌ಗೆ ಕರ್ನಾಟಕ ರತ್ನ ಗೌರವವೂ ಸಿಗುವಂತೆ ಮಾಡಿದ್ದರು… ಇನ್ನು ಇದೇ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿರುವ ಸಚಿವ ವಿ.ಸೋಮಣ್ಣ ಅವರು ತಮ್ಮ ಹಾಲಿ ಕ್ಷೇತ್ರ ಗೋವಿಂದರಾಜನಗರ ಕ್ಷೇತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಬೃಹತ್‌ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದ್ದರು.. ಅದನ್ನು ನೋಡಿ ಸ್ವತಃ ರಾಘವೇಂದ್ರ ರಾಜ್‌ಕುಮಾರ್‌ ಅವರು ಸೋಮಣ್ಣ ಅವರನ್ನು ಹಾಡಿಹೊಗಳಿದ್ದರು… ಆದ್ರೆ ಇಂದು ಅದೇ ಸೋಮಣ್ಣ ವಿರುದ್ದ ಶಿವರಾಜ್‌ಕುಮಾರ್‌ ಪ್ರಚಾರಕ್ಕೆ ಬಂದಿದ್ದು ಹಲವರ ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ.

ಈ ಬಗ್ಗೆ ಸ್ವತಃ ಸೋಮಣ್ಣ ಅವರು ಅಸಮಧಾನ ಹೊರಹಾಕಿದ್ದಾರೆ. ನಾನು ಪುನೀತ್‌ ಹೆಸರಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಿಸಿದ್ದೇನೆ… ಆದ್ರೂ ಶಿವಣ್ಣ ಯಾಕೆ ಇಲ್ಲಿ ಬಂದರೋ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.. ಇತ್ತ ಸಂಸದ ಪ್ರತಾಪ ಸಿಂಹ, ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವ ಭಾವ ಭಕುತಿಗೆ… ಅಂತ ಟ್ವೀಟ್‌ ಮಾಡಿದ್ದಾರೆ…

ಹಾಗಂತ ಶಿವರಾಜ್‌ ಕುಮಾರ್‌ ಹಿನ್ನೆಲೆಯನ್ನು ನೋಡಿದರೆ ಅವರು ಎಲ್ಲರನ್ನೂ ಪ್ರೀತಿಸುವವರು… ಯಾರನ್ನೂ ನೋಯಿಸದ ತಾಯಿ ಹೃದಯದ ಮನುಷ್ಯ… ಅವರಿಗೂ ಈ ರಾಜಕೀಯ ಅನ್ನೋದು ಇಷ್ಟವಿಲ್ಲ.. ಅನಿಸುತ್ತೆ… ಆದ್ರೆ ಈ ಬಾರಿ ಅವರು ಅನಿವಾರ್ಯ ಕಾರಣಕ್ಕೆ ಹೀಗೆ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತೆ… ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಮಧು ಬಂಗಾರಪ್ಪ ಅಂದರೆ ಪ್ರೀತಿ… ಮಧು ಬಂಗಾರಪ್ಪ ಈಗ ಕಾಂಗ್ರೆಸ್‌ನಲ್ಲಿದ್ದಾರೆ… ಸೊರಬ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ… ಕೊಂಚ ಸಂಕಷ್ಟದಲ್ಲಿರುವ ಮಧು ಬಂಗಾರಪ್ಪ ಅವರಿಗೆ ಹಲವಾರು ರೀತಿಯಲ್ಲಿ ಶಿವಣ್ಣ ಹಾಗೂ ಗೀತಾ ದಂಪತಿ ಬೆಂಬಲವಾಗಿದ್ದಾರೆ… ಇದೀಗ ಮಧು ಅವರನ್ನು ಶಾಸಕರನ್ನಾಗಿ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಶಿವಣ್ಣ ಹಾಗೂ ಗೀತಾ ದಂಪತಿ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ… ಬಾಮೈದನಿಗೆ ಶಿವಣ್ಣ ಬೆಂಬಲಿಸುತ್ತಿರುವುದು ತಪ್ಪೇನೂ ಅಲ್ಲ…

ಆದ್ರೆ ಇದರ ಜೊತೆಗೆ ಬೇರೆ ಬೇರೆ ನಾಯಕರ ಪರ ಶಿವಣ್ಣ ಪ್ರಚಾರ ಮಾಡುತ್ತಿರುವುದಕ್ಕೆ ಕೆಲವರಿಗೆ ಅಸಮಾಧಾನ ಉಂಟಾದಂತೆ ಕಾಣುತ್ತಿದೆ… ಹಾಗಂತ ಯಾರೂ ಕೂಡಾ ಶಿವಣ್ಣನ ವಿರುದ್ಧ ಮಾತನಾಡುತ್ತಿಲ್ಲ… ಬದಲಾಗಿ ಇಂತಹ ಒಳ್ಳೆ ಮನುಷ್ಯ ಹೀಗೆ ಮಾಡಬಾರದಿತ್ತು ಎಂದಷ್ಟೇ ಎಲ್ಲರೂ ಹೇಳುತ್ತಿದ್ದಾರೆ… ನಿಜ ಹೇಳಬೇಕು ಅಂದ್ರೆ ಶಿವಣ್ಣ ಅವರು ಮಧುಬಂಗಾರಪ್ಪ ಅವರಿಗಾಗಿಯೇ ಇದೆಲ್ಲಾ ಮಾಡ್ತಿದ್ದಾರೆ ಅಂದ್ರೆ ತಪ್ಪಾಗಲ್ಲ ಅನಿಸುತ್ತೆ… ಮಧು ಬಂಗಾರಪ್ಪ ಗೆದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗಬಹುದು ಅನ್ನೋ ಕಾರಣಕ್ಕಾಗಿ ಶಿವಣ್ಣ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ ಎಂಬ ಮಾತುಗಳೂ ಇವೆ.. ಇನ್ನೊಂದೆಡೆ ಮಧು ಬಂಗಾರಪ್ಪ ಅವರ ಒತ್ತಡಕ್ಕಾಗಿ, ಅವರ ಮೇಲಿನ ಪ್ರೀತಿಯಿಂದ ಶಿವಣ್ಣ ಪ್ರಚಾರ ನಡೆಸಿರಬಹುದು… ಆದ್ರೆ ಶಿವಣ್ಣ ಎಂದಿಗೂ ಎಲ್ಲರ ಹೃದಯದಲ್ಲಿರುವ ವ್ಯಕ್ತಿ ಅನ್ನೋದಂತೂ ಸತ್ಯ…

Share Post