BengaluruPolitics

ಇಂದು ಸಂಜೆ ಕುಮಾರಸ್ವಾಮಿ ದೆಹಲಿಗೆ; ಫೈನಲ್‌ ಆಗುತ್ತಾ ಸೀಟು ಹಂಚಿಕೆ..?

ಬೆಂಗಳೂರು; ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿವೆ. ಆದ್ರೆ ಸೀಟು ಹಂಚಿಕೆ ಇನ್ನೂ ಆಗಿಲ್ಲ. ಈ ಮೊದಲು ಜೆಡಿಎಸ್‌ ಪಕ್ಷ ಐದು ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿತ್ತು. ಈಗ ಏಳು ಕ್ಷೇತ್ರಗಳವರೆಗೆ ಬೇಡಿಕೆ ಇಡುತ್ತಿದೆ ಎನ್ನಲಾಗಿದೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿಯವರು ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದಾರೆ. ಬಿಜೆಪಿ ವರಿಷ್ಠ ನಾಯಕರನ್ನು ಭೇಟಿಯಾಗಲಿರುವ ಕುಮಾರಸ್ವಾಮಿಯವರು ಸೀಟು ಹಂಚಿಕೆಯ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದಾರೆ. 

ಏಳು ಕ್ಷೇತ್ರಗಳನ್ನು ಕೇಳಲಿದ್ದು, ಕೊನೆಯ ಪಕ್ಷ ಕನಿಷ್ಠ ಐದು ಕ್ಷೇತ್ರಗಳನ್ನು ಪಡೆಯಲು ಜೆಡಿಎಸ್‌ ನಿರ್ಧರಿಸಿದೆ ಎನ್ನಲಾಗಿದೆ. ಮಂಡ್ಯ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಕ್ಷೇತ್ರಗಳಿಗೆ ಜೆಡಿಎಸ್‌ ಪ್ರಮುಖವಾಗಿ ಬೇಡಿಕೆ ಇಡುತ್ತಿದೆ. ಇದರ ಜೊತೆ ಮೈಸೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿರುವ ಕುಮಾರಸ್ವಾಮಿ ಸಾಧ್ಯವಾದರೆ ಇಂದು ರಾತ್ರಿಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲಿದ್ದಾರೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಭೇಟಿಯಾಗುವ ಸಾಧ್ಯತೆ ಇದೆ. ಇನ್ನು ಈ ಬಾರಿ ಬಿಜೆಪಿ ಪಕ್ಷ 15 ರಿಂದ 18 ಸ್ಥಾನಗಳಲ್ಲಿ ಗೆಲ್ಲಲು ಟಾರ್ಗೆಟ್‌ ಹಾಕಿಕೊಂಡಿದೆ. ಉಳಿದ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಜೊತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರನ್ನೇ ಕಣಕ್ಕಿಳಿಯುವಂತೆ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿಯವರನ್ನು ಮಂತ್ರಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

Share Post