ಆತ್ಮನಿರ್ಭರ ಕೇಂದ್ರ ಬಜೆಟ್:ಸಂಸದ ನಳಿನ್ಕುಮಾರ್ ಕಟೀಲ್
ಬೆಂಗಳೂರು: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಬಜೆಟ್ನಲ್ಲಿ ಪ್ರಧಾನಿ ಗತಿಶಕ್ತಿ ಯೋಜನೆ, ಅಂತರ್ಗತ ಅಭಿವೃದ್ಧಿ, ಉತ್ಪಾದಕತೆ ಹೆಚ್ಚಳ, ಅಭಿವೃದ್ಧಿ ಅವಕಾಶ ಹೆಚ್ಚಳ, ಶಕ್ತಿ ಪರಿವರ್ತನೆ, ಹವಾಮಾನ ಸಂಬಂಧಿತ ಪ್ರಕ್ರಿಯೆ, ಹೂಡಿಕೆಗೆ ಹಣಕಾಸು ನೀಡಿಕೆ ಇದ್ದು ಇದೊಂದು ಆತ್ಮನಿರ್ಭರ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಪಿಎಂ ಗತಿಶಕ್ತಿ ಯೋಜನೆಯನ್ನು ರಸ್ತೆ, ರೈಲ್ವೆ, ವಿಮಾನನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಸಾರಿಗೆ ಮತ್ತು ಲಾಜಿಸ್ಟಿಕ್ ಇನ್ಫ್ರಾ ಎಂದು 7 ವಿಭಾಗಗಳನ್ನಾಗಿ ಮಾಡಿದ್ದು ಇದು ಸಮಗ್ರ ಪ್ರಗತಿಗೆ ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ 14 ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆಗೆ ಪೂರಕ ಹೂಡಿಕೆ (ಪಿಎಲ್ಐ) ಯೋಜನೆಗಳ ಮೂಲಕ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಇದು 30 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊಸ ಉತ್ಪಾದಕತೆಗೆ ಪೂರಕ ಎಂದು ವಿವರಿಸಿದ್ದಾರೆ.
ಸರ್ವಸ್ಪರ್ಶಿ ಸರ್ವವ್ಯಾಪಿ ಪ್ರಗತಿದಾಯಕ ಬಜೆಟ್ ಇದಾಗಿದ್ದು, ಪ್ರಧಾನಿಗಳಾದ ನರೇಂದ್ರ ಮೋದಿಯವರ ಆಶಯದಂತೆ 5 ಟ್ರಿಲಿಯನ್ ಅಮೆರಿಕಾದ ಡಾಲರ್ ಆರ್ಥಿಕ ಶಕ್ತಿಯತ್ತ ಭಾರತ ಮುನ್ನಡೆಯುವುದು ಖಚಿತ ಎಂದು ಆಶಿಸಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ದೇಶವಾಗುವತ್ತ ಭಾರತ ಮುನ್ನಡೆಯಲಿದೆ. ಇದರಿಂದ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.
ಜಿಡಿಪಿಯ ಶೇ 35 ರಷ್ಟು ಮೂಲಸೌಕರ್ಯ ಕ್ಷೇತ್ರಕ್ಕೆ ನೀಡಿರುವುದು ಅಭಿವೃದ್ಧಿಗೆ ಪೂರಕ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನದಿ ಜೋಡಣೆಗೆ ಮುಂದಾಗಿರುವುದು ನೀರಿನ ಸದ್ಬಳಕೆಗೆ ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಕೇಂದ್ರ ಮುಂದಾಗಿದೆ. ಬೆಳೆ ದಾಖಲು, ಬೆಳೆ ಮೌಲ್ಯಮಾಪನಕ್ಕೆ ಹಾಗೂ ಕೀಟನಾಶಕಗಳನ್ನು ಸಿಂಪಡಿಸಲು ಕಿಸಾನ್ ಡ್ರೋನ್ ಬಳಕೆ ಉತ್ತೇಜಿಸಲು ಮುಂದಾಗಿರುವುದು ಮಹತ್ವದ ಕ್ರಮ ಎಂದು ಅವರು ತಿಳಿಸಿದ್ದಾರೆ.