Bengaluru

ಸ್ಯಾಂಡಲ್‌ವುಡ್‌ ಹಾಸ್ಯ ಕಲಾವಿದ ಮೋಹನ್‌ ಜುನೇಜ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದ ಮೋಹನ್ ಜುನೇಜ (54) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೆಸರುಘಟ್ಟದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋಹನ್ ಜುನೇಜ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಕೆಜಿಎಫ್‌ ಸಿನಿಮಾದಲ್ಲೂ ಅವರು ಬಣ್ಣ ಹಚ್ಚಿದ್ದರು. ಅವರು ಇಬ್ಬರು ಪುತ್ರರು, ಪತ್ನಿಯನ್ನು ಅಗಲಿದ್ದಾರೆ.

ಮೋಹನ್‌ ಅವರು ವಠಾರ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದರು. ನಂತರ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನು ರಂಜಿಸಿದ್ದರು. ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್ ಜುನೇಜ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಹೆಸರಘಟ್ಟದ ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ.

Share Post