ಅಡುಗೆ ಅನಿಲ ಬೆಲೆ ಐವತ್ತು ರೂಪಾಯಿ ಏರಿಕೆ
ನವದೆಹಲಿ: ಗ್ರಾಹಕರಿಗೆ ಮತ್ತೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಅಡುಗೆ ಅನಿಲ ರಿಫಿಲಿಂಗ್ ಬೆಲೆ ಐವತ್ತು ರೂಪಾಯಿ ಜಾಸ್ತಿ ಮಾಡಲಾಗಿದೆ. ಇದರಿಂದಾಗಿ 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಸಾವಿರ ರೂಪಾಯಿ ಗಡಿ ಮುಟ್ಟುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಬೆಲೆ 999.50 ರೂಪಾಯಿ ಆಗಿದೆ.
ಮೇ 1 ರಂದು, ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ 102.50 ಹೆಚ್ಚಳ ಮಾಡಲಾಗಿತ್ತು. 5 ಕೆ.ಜಿ ಸಿಲಿಂಡರ್‌ನ ಬೆಲೆಯನ್ನು 655 ರೂಪಾಯಿ ಮಾಡಲಾಗಿತ್ತು. ಇದೀಗ ಅಡುಗೆ ಅನಿಲ ಕೂಡಾ ಹೆಚ್ಚು ಮಾಡಲಾಗಿದ್ದು, ಗ್ರಾಹಕರಿಗೆ ಹೊರೆಯಾದಂತಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಜನರು ಈಗಾಗಲೇ ತೊಂದರೆಗೊಳಗಾಗಿರುವ ಸಮಯದಲ್ಲಿ ಸಿಲಿಂಡರ್ ಬೆಲೆ ಏರಿಕೆ ಕಂಡಿದ್ದು, ಸಾಮಾನ್ಯ ಜನರ ಸಂಕಷ್ಟಗಳನ್ನು ಹೆಚ್ಚಿಸಲಿದೆ.