ಅಂತಾರಾಷ್ಟ್ರೀಯ ಸೆಕ್ಸ್ ವರ್ಕರ್ಸ್ ಡೇ; ಮಹಿಳೆಯರು ಏಕೆ ವೇಶ್ಯಾವೃತ್ತಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ..?
ಬೆಂಗಳೂರು; ಜೂನ್ 2 ಅಂತಾರಾಷ್ಟ್ರೀಯ ಸೆಕ್ಸ್ ವರ್ಕಸ್ ಡೇ. ಈ ದಿನವನ್ನು ಆಚರಣೆ ಮಾಡಬೇಕೋ, ಇದನ್ನು ಕಪ್ಪು ದಿನ ಅನ್ನಬೇಕೋ ಗೊತ್ತಿಲ್ಲ. ಆದ್ರೆ ಸೆಕ್ಸ್ ವರ್ಕರ್ಸ್‌ಗೂ ಒಂದು ದಿನ ಅಂತ ನಿಗದಿಯಾಗಿದೆ. ಅಂದಹಾಗೆ, ವೇಶ್ಯಾವೃತ್ತಿ ಮಾಡುವುದು ಸಮಾಜದಲ್ಲಿ ತಲೆತಗ್ಗಿಸುವಂತ ವೃತ್ತಿ. ಸಮಾಜದಲ್ಲಿ ಅಂತಹವರಿಗೆ ಎಳ್ಳಷ್ಟೂ ಗೌರವ ಕೂಡಾ ಕೊಡೋದಿಲ್ಲ. ಬದುಕಿದಷ್ಟೂ ದಿನ ನಿಕೃಷ್ಟವಾಗೇ ಬದುಕಬೇಕು. ಆದರೂ ಕೂಡಾ ಎಷ್ಟೋ ಜನ ಈ ವೃತ್ತಿಗೆ ತಳ್ಳಲ್ಪಡುತ್ತಿದ್ದಾರೆ. ಕೆಲವರು ಬಲವಂತವಾಗಿ ಈ ವೃತ್ತಿಗೆ ನೂಕಲ್ಪಡುತ್ತಿದ್ದಾರೆ. ಬಡ ಹೆಣ್ಣು ಮಕ್ಕಳನ್ನು ಖರೀದಿ ಮಾಡಿ ತಂದು ವೇಶ್ಯಾವೃತ್ತಿಗೆ ದಬ್ಬಲಾಗುತ್ತಿದೆ. ವೇಶ್ಯಾವಾಟಿಕೆ ನಡೆಸುವುದು ನಮ್ಮ ದೇಶದಲ್ಲಿ ಕಾನೂನು ಬಾಹಿರ. ಇದರ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ. ಹಲವು ಸರ್ಕಾರೇತರ ಸಂಸ್ಥೆಗಳು ವೇಶ್ಯಾವಾಟಿಕೆ ವಿರುದ್ಧ ಸಮರ ಸಾರಿವೆ.
ಕರ್ನಾಟಕದಲ್ಲಿ ವೇಶ್ಯಾವಾಟಿಕೆ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಸಂಸ್ಥೆ ಮೈಸೂರಿನ ಒಡನಾಡಿ ಸಂಸ್ಥೆ. ಈ ಸಂಸ್ಥೆಯ ಮಖ್ಯಸ್ಥರಾದ ಪರಶುರಾಮ್ ಹಾಗೂ ಸ್ಟ್ಯಾನ್ಲಿ ಕಳೆದ ಮೂರೂವರೆ ದಶಕದಿಂದ ವೇಶ್ಯಾವಾಟಿಕೆ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಸಾವಿರಾರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿರುವವರಿಗೆ ಶಿಕ್ಷೆ ಕೂಡಾ ಕೊಡಿಸಿದ್ದಾರೆ. ಇಂತ ಹಲವಾರು ಸಂಸ್ಥೆಗಳು ನಮ್ಮ ನಡುವೆ ಇವೆ. ಹೀಗಿದ್ದರೂ ವೇಶ್ಯಾವಾಟಿಕೆ ಎಲ್ಲೆಡೆ ನಡೆಯುತ್ತಿದೆ. ಬಹುತೇಕ ಕಡೆ ವೇಶ್ಯಾವಾಟಿಕೆಗೆ ಪೊಲೀಸರ ಬೆಂಬಲವೂ ಇದೆ ಅನ್ನೋ ಆರೋಪವಿದೆ.
ಅಷ್ಟಕ್ಕೂ ಈ ಅನಿಷ್ಟ ವೃತ್ತಿಗೆ ಮಹಿಳೆಯರು ಯಾಕೆ ಬರುತ್ತಿದ್ಧಾರೆ..? ದುಡಿಯುವ ಶಕ್ತಿ ಇದ್ದರೂ ಯಾಕೆ ಈ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ..? ಮದುವೆ ಮಾಡಿಕೊಂಡು ಸುಖ ಜೀವನ ನಡೆಸುವುದಕ್ಕೆ ಅವಕಾಶವಿದ್ದರೂ ಯಾಕೆ ಈ ನರಕ ಅನುಭವಿಸುತ್ತಿದ್ದಾರೆ..? ಅನ್ನೋದೇ ಪ್ರಶ್ನೆ. ಯಾಕಂದ್ರೆ ಮಹಿಳೆ ಸ್ವಾಭಿಮಾನವನ್ನು ಎಂದೂ ಬಿಟ್ಟುಕೊಡೋದಿಲ್ಲ. ಗಂಡ ಕೆಟ್ಟವನಾದರೂ ಅವನನ್ನು ತಿದ್ದೋ ಪ್ರಯತ್ನ ಮಾಡುತ್ತಾಳೆ. ಆದ್ರೆ ಅದೇ ಹೆಣ್ಣು ಇನ್ನೊಂದೆಡೆ ಇಂತಹ ಕೆಲಸಕ್ಕೆ ಯಾಕೆ ಮುಂದಾಗುತ್ತಿದ್ದಾಳೆ..? ಎಂಬ ಪ್ರಶ್ನೆಯೊಂದಿಗೆ ಕೆಲವು ಸೆಕ್ಸ್ ವರ್ಕರ್‌ಗಳನ್ನು ಮಾತನಾಡಿರುವ ಪ್ರಯತ್ನ ಮಾಡಿದ್ದೇವೆ. ಅವರ ಮನವಿ ಮೇರೆಗೆ ಆ ಹೆಣ್ಣು ಮಕ್ಕಳ ಹೆಸರು, ಮತ್ತಿತರೆ ಮಾಹಿತಿಗಳನ್ನು ಇಲ್ಲಿ ನೀಡುತ್ತಿಲ್ಲ. ಬರೀ ಅವರ ಗೋಳಿನ ಕಥೆಗಳನ್ನಷ್ಟೇ ಕಟ್ಟಿಕೊಟ್ಟಿದ್ದೇವೆ.
ಗಂಡ ಸಾಲ ಮಾಡಿ ಓಡಿಹೋದ;
ಆಕೆಗೆ ಇನ್ನೂ 25 ವರ್ಷವೂ ತುಂಬಿಲ್ಲ. ಎರಡು ಮಕ್ಕಳಿದ್ದಾರಂತೆ. ಪಿಯುಸಿ ಓದಿಕೊಂಡಿರುವ ಆಕೆ ಆಂಧ್ರದ ಗಡಿಯಲ್ಲಿರುವ ಒಂದು ಊರಿನಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದಾಳೆ. ಆಕೆಯ ಗೋಳನ್ನು ಆಕೆಯ ಮಾತುಗಳಲ್ಲೇ ಇಲ್ಲಿ ಬರೆಯಲಾಗಿದೆ. ನಾನು ಪಿಯುಸಿ ಓದಿ ಹೋಮ್ ನರ್ಸ್ ಟ್ರೈನಿಂಗ್ ತಗೊಂಡಿದ್ದೇನೆ. ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತೇನೆ. ಗಂಡ ಡ್ರೈವರ್ ಕೆಲಸ ಮಾಡುತ್ತಿದ್ದ. ಆತ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಇಸ್ಪಿಟ್ ದಾಸನಾಗಿದ್ದ. ಆತ ದುಡಿಯುವುದಕ್ಕಿಂತ ಸಾಲ ಮಾಡುವುದೇ ಹೆಚ್ಚಾಗಿತ್ತು. ಆತ ಹಣಕ್ಕಾಗಿ ನನ್ನನ್ನು ಪೀಡಿಸುತ್ತಲೇ ಇದ್ದ. ಹೀಗಾಗಿ ಅನಿವಾರ್ಯವಾಗಿ ನಾನೇ ಗೊತ್ತಿದ್ದವರ ಬಳಿಯೆಲ್ಲಾ ಸಾಲ ಮಾಡಿ ಹಣ ತಂದುಕೊಡುತ್ತಿದ್ದೆ. ಸಾಲ, ಬಡ್ಡಿ ಬೆಳೆದು ಅದು ಐದು ಲಕ್ಷ ರೂಪಾಯಿ ಆಗಿತ್ತು. ಯಾವಾಗ ಸಾಲಗಾರರು ಮನೆ ಬಳಿ ಬಂದು ಹಣಕ್ಕಾಗಿ ಒತ್ತಾಯ ಮಾಡೋಕೆ ಶುರು ಮಾಡಿದರೂ, ಅವನು ಮನೆಯಿಂದ ಪರಾರಿಯಾಗಿಬಿಟ್ಟ. ಎಂಟು ತಿಂಗಳಾಯ್ತು, ಅವನು ಎಲ್ಲಿದ್ದಾನೆ ಅನ್ನೋದೇ ಗೊತ್ತಿಲ್ಲ. ಬಹುತೇಕರಿಂದ ನಾನೇ ಸಾಲ ತೆಗೆದುಕೊಂಡು ಬಂದು ಕೊಟ್ಟಿದ್ದರಿಂದ ಅವರೆಲ್ಲಾ ನನ್ನನ್ನು ಕೇಳುತ್ತಿದ್ದಾರೆ. ನಾನು ಸ್ವಾಭಿಮಾನದಿಂದ ಬದುಕಿದವಳು. ಹೀಗಾಗಿ, ಸಾಲ ತೀರಿಸೋ ಕಾರಣದಿಂದ ನಾನು ವೃತ್ತಿಗಿಳಿದಿದ್ದೇನೆ. ನನ್ನ ಬಗ್ಗೆ ನನಗೇ ಅಸಹ್ಯವಾಗುತ್ತದೆ. ಆದರೂ ಎರಡು ವರ್ಷದ ಮಟ್ಟಿಗಾದರೂ ನನಗೆ ಈ ವೃತ್ತಿ ಮಾಡುವ ಅನಿವಾರ್ಯತೆ ಇದೆ.
ಹಲವು ಚೀಟಿಗಳನ್ನು ಎತ್ತಿಕೊಂಡಿದ್ದೇವೆ. ಇಎಂಐಗಳನ್ನು ಕಟ್ಟಬೇಕಿದೆ. ಇದಕ್ಕಾಗಿ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಬೇಕು. ನಾನು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತೇನೆ. ಅದರಿಂದ ತಿಂಗಳಿಗೆ 18 ಸಾವಿರ ರೂಪಾಯಿ ಸಂಬಳ ಬರುತ್ತದೆ. ಮಧ್ಯಾಹ್ನದ ನಂತರ ನಾನು ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಹೀಗೆ ಮಾಡುತ್ತಿರುವುದು ನನ್ನ ಪೋಷಕರಿಗೆ ಗೊತ್ತಿಲ್ಲ. ನನಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ. ಎರಡು ವರ್ಷದವರೆಗೆ ನನಗೆ ಈ ನರಕ ಇದ್ದಿದ್ದೇ. ಸಾಲ ಸಾಲ ತೀರದ ಮೇಲೆ ಇದೊಂದು ಕೆಟ್ಟ ಕನಸು ಎಂದುಕೊಂಡು ಎಲ್ಲವನ್ನೂ ಮರೆತು ಮಕ್ಕಳ ಜೊತೆ ಜೀವಿಸಿಬಿಡುತ್ತೇನೆ.
ಗಂಡ ತೀರಿಹೋದ, ಈ ವೃತ್ತಿ ಅನಿವಾರ್ಯವಾಯಿತು..!
ನಮ್ಮೂರು ಹಾಸನದ ಬಳಿ ಹಳ್ಳಿ. ದುಡಿಯೋಕೆ ಅಂತ ಬೆಂಗಳೂರಿಗೆ ಬಂದಿದ್ದೆವು. ನೆಲಮಂಗಲ ಸಮೀಪ ಮನೆ ಇದೆ. ನಾನು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದೆ. ನನ್ನ ಗಂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸೇರಿದ್ದ. ಮೊದಲಿಗೆ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ, ಇಪ್ಪತ್ತು ವರ್ಷಗಳ ಹಿಂದೆ ಗಂಡನಿಗೆ ಆಕ್ಸಿಡೆಂಟ್ ಆಯಿತು. ಹಲವು ದಿನಗಳ ನರಳಾಟದ ನಂತರ ತೀರಿಹೋದ. ಅಷ್ಟರಲ್ಲಾಗಲೇ ನನಗೆ ಇಬ್ಬರು ಗಂಡು ಮಕ್ಕಳಿದ್ದರು. ಹೇಗೋ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಮಾಡುತ್ತಾ ಮಕ್ಕಳನ್ನು ಓದಿಸುತ್ತಿದ್ದೆ. ಆದ್ರೆ, ಗಂಡ ಸತ್ತ ಕಾರಣಕ್ಕಾಗಿ ಅಲ್ಲಿದ್ದ ಗಂಡಸರು ನನ್ನ ಮೇಲೆ ಕಣ್ಣು ಹಾಕಿದರು. ಸೂಪರ್ ವೈಸರ್‌ಗಳೇ ಬಲವಂತವಾಗಿ ನನ್ನನ್ನು ಬಳಸಿಕೊಂಡರು. ಅನಂತರ ನಾನು ಅಲ್ಲಿಂದ ಹೊರಬಿದ್ದೆ. ನಂತರ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಸೇರಿಕೊಂಡೆ. ಅಲ್ಲೂ ಕೂಡಾ ಇಂತಹದ್ದೇ ಕಹಿ ಘಟನೆಗಳು ನಡೆದವು. ಇದೇ ವೇಳೆ ಮಹಿಳೆಯೊಬ್ಬಳು ನನಗೆ ಪರಿಚಯವಾದಳು. ಆಕೆ ನನಗೆ ಈ ವೃತ್ತಿಗೆ ಪರಿಚಯಿಸಿದಳು. ಹದಿನೈದು ವರ್ಷಗಳಿಂದ ಇದೇ ವೃತ್ತಿ ಮಾಡುತ್ತಿದ್ದೇನೆ. ನೋವಾಗುತ್ತೆ. ಆದ್ರೆ, ಈ ಜನ್ಮ ಇಷ್ಟೇ ಎಂದುಕೊಂಡಿದ್ದೇನೆ. ಮಕ್ಕಳಿಬ್ಬರೂ ಓದಿ ದೊಡ್ಡವರಾಗಿದ್ದಾರೆ. ಆದ್ರೆ, ಅವರು ಬೇರೆ ಇದ್ದಾರೆ. ಅವರು ನನ್ನ ದೂರ ಇಟ್ಟಿದ್ದಾರೆ.
ಸ್ವಂತ ಮನೆ ಇದೆ, ಕೆಲಸಕ್ಕೆ ಹೋಗುತ್ತೇನೆಂದು ಈ ವೃತ್ತಿಗೆ ಬರುತ್ತೇನೆ..!
ನಮ್ಮದು ಮೂಲ ತಮಿಳುನಾಡು. ಬೆಂಗಳೂರಿನ ಕಾಮಾಕ್ಷಿ ಪಾಳ್ಯಕ್ಕೆ ಕೊಟ್ಟು ನಮ್ಮ ಹಿರಿಯರು ಮದುವೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯದಲ್ಲಿ ಸ್ವಂತ ಮನೆ ಇದೆ. ಆದ್ರೆ ಗಂಡ ತೀರಿಹೋಗಿ ಇಪ್ಪತ್ತೈದು ವರ್ಷಗಳಾದವು. ಮನೆಯಲ್ಲಿ ನಾನು, ಅತ್ತೆ, ಮಗಳು ಇದ್ದಾರೆ. ನನ್ನ ಗಂಡ ತೀರಿ ಹೋದ ಮೇಲೆ ಅತ್ತೆ ನನ್ನ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಕೆಲಸಕ್ಕೆ ಹೋಗಿ ಹಣ ತಂದುಕೊಡು ಎನ್ನುತ್ತಾಳೆ. ಹೀಗಾಗಿ, ನಾನು ಕೆಲ ದಿನ ಕೆಲಸಕ್ಕೆ ಹೋಗಿದ್ದೆ. ಆದ್ರೆ ಯಾವುದೋ ಕಾರಣಕ್ಕೆ ನಾನು ಈ ವೃತ್ತಿಗೆ ಬರಬೇಕಾದ ಅನಿವಾರ್ಯತೆ ಬಂತು. ಮಗಳು ಡಿಗ್ರಿ ಓದುತ್ತಿದ್ದಾಳೆ. ಅವಳಿಗೆ ಇದೆಲ್ಲಾ ಗೊತ್ತಿಲ್ಲ. ನನ್ನ ಅತ್ತೆಗೂ ಗೊತ್ತಿಲ್ಲ. ನಾನು ಕೆಲಸ ಹೋಗುತ್ತಿದ್ದೇನೆ ಎಂದು ಬೆಳಗ್ಗೆ 9 ಗಂಟೆಗೆ ಮನೆ ಬಿಡುತ್ತೇನೆ. ಸಂಜೆ ಆರು ಗಂಟೆಗೆಲ್ಲಾ ಮನೆ ಸೇರಿಬಿಡುತ್ತೇನೆ. ಇಲ್ಲಿ ಸಂಪಾದನೆ ಮಾಡಿದ್ದನ್ನು ಹಾಗೆಯೇ ಇಟ್ಟುಕೊಂಡು ತಿಂಗಳ ಮೊದಲ ವಾರದಲ್ಲಿ ಸಂಬಳ ಬಂತು ಎಂದು ಹೇಳಿ ಅತ್ತೆಗೆ ಹಣ ಕೊಡುತ್ತೇನೆ. ಇದರಿಂದ ಆಕೆ ಖುಷಿಯಾಗಿದ್ದಾಳೆ. ಏನಾದರೂ ಕೆಲಸ ಮಾಡಿ ಜೀವನ ಸಾಗಿಸಬಹುದುತ್ತೇನೋ.. ಆದ್ರೆ ಕೆಟ್ಟ ಘಳಿಗೆಯೊಂದು ನನ್ನ ಈ ವೃತ್ತಿಗೆ ತಂದು ನಿಲ್ಲಿಸಿದೆ.
ಹೀಗೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರದ್ದು ಒಬ್ಬೊರದ್ದು ಒಂದೊಂದು ಗೋಳು. ಬಹುತೇಕರು ಅನಿವಾರ್ಯ ಕಾರಣಕ್ಕೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಇಷ್ಟಪಟ್ಟೇ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬಂದವರೂ ಇದ್ದಾರಂತೆ. ಅವರಿಗೆ ಶೋಕಿ ಜೀವನ ನಡೆಸುವ ಆಸೆ. ಇದರಲ್ಲಿ ಸುಲಭವಾಗಿ ಹಣ ಗಳಿಸಬಹುದೆಂಬ ಕಾರಣಕ್ಕೆ ಅವರು ಈ ವೃತ್ತಿ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ, ಹೆಣ್ಣು ಭೋಗದ ವಾಸ್ತುವಾಗಿ ಮಾರಾಟದ ಸರಕಾಗಿ ಬೀದಿಯಲ್ಲಿ ನಿಂತಿರುವುದು ಸಮಾಜ ತಲೆತಗ್ಗುಸುವಂತಹ ವಿಚಾರ.