ಮಾಡಾಳ್‌ಗೆ ಮಧ್ಯಂತರ ಜಾಮೀನು; ಬಂಧನದಿಂದ ತಪ್ಪಿಸಿಕೊಂಡ ಬಿಜೆಪಿ ಶಾಸಕ
ಬೆಂಗಳೂರು; ಟೆಂಡರ್ ನೀಡಲು ಲಂಚ ಪಡೆದ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಐದು ಲಕ್ಷ ಬಾಂಡ್, ಇಬ್ಬರು ಶೂರಿಟಿ ಮೇಲೆ ಜಾಮೀನು ನೀಡಿ ಹೈಕೋರ್ಟ್ ಏಕಸದಸ್ಯಪೀಠ ಈ ಆದೇಶ ಹೊರಡಿಸಿದೆ. ಇದರಿಂದಾಗಿ ಮಾಡಾಳ್ ವಿರೂಪಾಪಕ್ಷಪ್ಪ ಅವರು ಬಂಧನದ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ.
ಇಂದು ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುಂದೆ ವಿರೂಪಾಕ್ಷಪ್ಪ ಪರ ವಕೀಲರು ವಾದ ಮಂಡಿಸಿದರು. ವಿರೂಪಾಕ್ಷಪ್ಪ ಅವರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಶಾಸಕರು ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದರೂ, ಟೆಂಡರ್ ಅಕ್ಸೆಪ್ಟಿಂಗ್ ಕಮಿಟಿಯಲ್ಲಿ ಅವರಿಗೆ ಅವಕಾಶವಿರುವುದಿಲ್ಲ. ಅಧಿಕಾರಿಗಳೇ ಟೆಂಡರ್ ಫೈನಲ್ ಮಾಡುತ್ತಾರೆ. ಹೀಗಾಗಿ ಈ ಪ್ರಕರಣದಲ್ಲಿ ಶಾಸಕರ ಪಾತ್ರ ಇಲ್ಲ. ಶಾಸಕರಿಗೆ ವಯಸ್ಸಾಗಿದ್ದು, ಅನಾರೋಗ್ಯ ಕೂಡಾ ಇದೆ. ಹೀಗಾಗಿ ಅವರಿಗೆ ಬಂಧನದ ಭೀತಿ ಇದ್ದು, ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಅಂತ ವಕೀಲರು ಕೋರ್ಟ್‌ಗೆ ಮನವಿ ಸಲ್ಲಿಸಿದರು.
ಲೋಕಾಯುಕ್ತ ಪರ ವಕೀಲರು ದಾಖಲೆ ಸಲ್ಲಿಸಲು ಕಾಲಾವಕಾಶ ಕೋರಿದರು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಸಲ್ಲಿಸುವವರೆಗೂ ಮಾಡಾಳ್ ಅವರಿಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಸಮ್ಮತಿಸಿತು. ಈ ಮಧ್ಯಂತ ಜಾಮೀನು ಮಾರ್ಚ್ 17ರವೆರೆಗೂ ಊರ್ಜಿತವಾಗಿರಲಿದೆ. ಇನ್ನು ಇದೇ ವೇಳೆ ಕೋರ್ಟ್ ಮಾಡಾಳ್‌ಗೆ ಸೂಚನೆ ನೀಡಿದೆ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ವಿಚಾರಣೆಗೆ ಸಹಕರಿಸಬೇಕು ಎಂದು ಹೇಳಿದೆ.