ರಾಜ್ಯದಲ್ಲಿ ಜನರಿಗೆ ತಟ್ಟುತ್ತಾ ಬಿಸಿಗಾಳಿ ಶಾಕ್..?; ಇದರಿಂದ ರಕ್ಷಿಸಿಕೊಳ್ಳೋದು ಹೇಗೆ..?
ಬೆಂಗಳೂರು; ಬೇಸಿಗೆ ಈಗಾಗಲೇ ಶುರುವಾಗಿದೆ. ರಾಜ್ಯದ ಹಲವೆಡೆ ಸೆಖೆಗೆ ಜನ ಆಚೆಗೆ ಬರಲಾಗುತ್ತಿಲ್ಲ. ಇನ್ನು ಈ ಬಾರಿ ದೇಶದ ಹಲವು ಭಾಗಗಳಲ್ಲಿ ಬಿಸಿಗಾಳಿಗೆ ಜನರು ತತ್ತರಿಸಲಿದ್ದಾರೆ ಅಂತ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲೂ ಅದರಲ್ಲೂ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಪ್ರದೇಶದಲ್ಲಿ ಬಿಸಿಗಾಳಿ ಪ್ರಭಾವ ಹೆಚ್ಚಾಗಿರುತ್ತದಂತೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಈ ಬಗ್ಗೆ ಗೈಡ್‌ಲೈನ್ಸ್ ಕೂಡಾ ಜಾರಿ ಮಾಡಿದೆ.
ಬಿಸಿಗಾಳಿಯಿಂದಾಗಿ ಜನರಲ್ಲಿ ಅನಾರೋಗ್ಯವುಂಟಾಗಬಹುದು. ಅದರಲ್ಲೂ ಮಕ್ಕಳು, ಮಹಿಳೆಯರು, ಹಿರಿಯರು ಹೆಚ್ಚು ಮಂಜಾಗ್ರತೆ ವಹಿಸಬೇಕು. ಆದಷ್ಟು, ಬೆಳಗ್ಗೆ 11 ಗಂಟೆಯ ನಂತರ ಹಾಗೂ ಮಧ್ಯಾಹ್ನ 4 ಗಂಟೆ ಒಳಗೆ ಮನೆಯಿಂದ ಹೊರಗೆ ಬರದಿರುವುದು ಒಳ್ಳೆಯದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ನೀಡಿರುವ ಗೈಡ್‌ಲೈನ್ಸ್ ಹೀಗಿವೆ:
೧. ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಿರಿ
೨. ಹೊರಗಡೆ ಅಥವಾ ದೂರದ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದರೆ ನೀರು ಜೊತೆಯಲ್ಲಿಟ್ಟುಕೊಂಡು ಹೋಗಿ
೩. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು
೪. ಕಾಟನ್ ಬಟ್ಟೆ ಧರಿಸಿದರೆ ಬೇಸಿಗೆಯಲ್ಲಿ ಒಳ್ಳೆಯದು. ಹೆಚ್ಚು ಬೆವರುವುದಿಲ್ಲ
೫. ಮಧ್ಯಾಹ್ನ 11 ರಿಂದ 3ರ ವರೆಗೆ ಹೆಚ್ಚು ಬಿಸಿಲಿರುತ್ತದೆ. ಈ ಸಮಯದಲ್ಲಿ ಹೊರಗೆ ಬರದಿರುವುದೇ ಒಳ್ಳೆಯದು
೬. ಬೇಸಿಗೆ ಇರುವುದರಿಂದ ಮನೆಯಲ್ಲಿ ಸರಿಯಾಗಿ ಗಾಳಿ ಬರುವುದಿಲ್ಲ, ಜೊತೆಗೆ ಸೆಖೆ ಹೆಚ್ಚಿರುವುದರಿಂದ ಮನೆಯ ಕಿಟಕಿಗಳನ್ನು ಸಾಧ್ಯವಾದಷ್ಟು ತೆರೆದಿಡಿ
೭. ಅಡುಗೆ ಕೋಣೆಗೆ ವೆಂಟಿಲೇಷನ್ ಇರುವಂತೆ ನೋಡಿಕೊಳ್ಳಬೇಕು
೮. ಬಯಲಿನಲ್ಲಿ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೆ ನೀರು ಕುಡಿಯಬೇಕು
೯. ಮಕ್ಕಳು, ವೃದ್ಧರು, ಸಾಕು ಪ್ರಾಣಿಗಳನ್ನು ಕಾರಿನ ಒಳಗೆ ಕೂರಿಸಿ ಹೊರಗಿಂದ ಲಾಕ್ ಮಾಡಬಾರದು
೧೦. ಬೇಸಿಗೆಯಲ್ಲಿ ಟೀ, ಕಾಫಿ, ಮದ್ಯ ಸೇವಿಸುವುದನ್ನು ಕಡಿಮೆ ಮಾಡಿ, ಜ್ಯೂಸ್ ಕುಡಿಯುವುದು ಒಳ್ಳೆಯದು
೧೧. ಗರ್ಭಿಣಿಯರು, ಮಕ್ಕಳು, ಬಿಸಿಲಿಗೆ ಕೆಲಸ ಮಾಡುವ ಕಾರ್ಮಿಕರು, ಕಾರು ಚಾಲಕರು ಎಚ್ಚರಿಕೆಯಿಂದ ಇರಬೇಕು