ಮುರುಘಾ ಮಠದ ಶಿವಮೂರ್ತಿಗೆ ಮತ್ತೆ ಬಂಧನದ ಭೀತಿ
ಚಿತ್ರದುರ್ಗ; ನಾಲ್ಕು ದಿನದ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಚಿತ್ರದುರ್ಗದ ಶಿವಮೂರ್ತಿಯವರಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ. ಶಿವಮೂರ್ತಿ ವಿರುದ್ಧದ ಎರಡನೇ ಕೇಸ್ನಲ್ಲಿ ಬಂಧಿಸುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಹೀಗಾಗಿ, ನಾಲ್ಕೇ ದಿನಕ್ಕೆ ಶಿವಮೂರ್ತಿಗೆ ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಬಂದಿದೆ.
ಶಿವಮೂರ್ತಿ ವಿರುದ್ಧ ಎರಡು ಪೋಕ್ಸೋ ಕೇಸ್ಗಳು ದಾಖಲಾಗಿದ್ದು, ಮೊದಲ ಕೇಸ್ನಲ್ಲಿ ಜಾಮೀನು ಸಿಕ್ಕಿತ್ತು. ಆದ್ರೆ ಎರಡನೇ ಕೇಸ್ನ ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಶಿವಮೂರ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಶಿವಮೂರ್ತಿಗೆ ಬಂಧನದ ವಾರಂಟ್ ಜಾರಿ ಮಾಡಬೇಕೆಂದು ಸರ್ಕಾರಿ ವಕೀಲ ಜಗದೀಶ್ ವಾದಿಸಿದ್ದರು. ಮುರುಘಾ ಶ್ರೀ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ ಕೂಡಾ ಒಪ್ಪದ ಕೋರ್ಟ್, ಶಿವಮೂರ್ತಿ ಬಂಧನಕ್ಕೆ ಆದೇಶ ಹೊರಡಿಸಿದೆ.
1ನೇ ಪೋಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಪಡೆದ ಕಾರಣ ಮತ್ತೆ ಅವರ ಬಂಧನದ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶ್ರೀ ಪರ ವಕೀಲ ಉಮೇಶ್ ವಾದಿಸಿದ್ದರು. ಆದ್ರೆ ಕೇರಳದ ಪ್ರಕರಣವೊಂದರ ಉಲ್ಲೇಖದನ್ವಯ ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಕೋರ್ಟ್ ಸೂಚಿಸಿದೆ.