BengaluruTechTechnology

ಬೆಂಗಳೂರಿನಲ್ಲಿ ದೇಶದ ಪ್ರಥಮ 3ಡಿ ಮುದ್ರಿತ ಪೋಸ್ಟ್‌ ಆಫೀಸ್‌ ಉದ್ಘಾಟನೆ

ಬೆಂಗಳೂರು; 3ಡಿ ತಂತ್ರಜ್ಞಾನ ಬಳಸಿ ಕಟ್ಟಡಗಳನ್ನು ಕಟ್ಟುತ್ತಿರುವ ಬಗ್ಗೆ ಈಗಾಗಲೇ ನಮಗೆ ಗೊತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿ 3ಡಿ ತಂತ್ರಜ್ಞಾನ ಬಳಸಿ ಕಟ್ಟಲ್ಪಟ್ಟ ಪೋಸ್ಟ್‌ ಆಫೀಸ್‌ ಕಟ್ಟಡವನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದಾರೆ.

ಇದು 3ಡಿ ಮುದ್ರಿತ ಮೊದಲ ಸರ್ಕಾರಿ ಕಟ್ಟಡವಾಗಿದೆ. ಎಲ್‌ ಅಂಡ್‌ ಟಿ ಸಂಸ್ಥೆ ಈ ಕಟ್ಟಡವನ್ನು ನಿರ್ಮಾಣ ಮಾಡಿದೆ. ಈ ಕಟ್ಟಡ ಸುಮಾರು 1100 ಚದರ ಅಡಿ ಇದ್ದು, ಈ ಕಟ್ಟಡ ನಿರ್ಮಾಣಕ್ಕೆ ತೆರಿಗೆ ಸೇರಿ ಒಟ್ಟು 26 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇನ್ನು ನೀರು, ಒಳಚರಂಡಿ ವ್ಯವಸ್ಥೆಗೆ ಪ್ರತ್ಯೇಕವಾಗಿ ಹೆಚ್ಚುವರಿ 40 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ತಿಳಿದುಬಂದಿದೆ. ಇದೇ ಮಾರ್ಚ್‌ 21ರಂದು ಈ ಕಟ್ಟಡದ ಕಾಮಗಾರಿ ಶುರುವಾಗಿತ್ತು. ಮೇ 3ಕ್ಕೆ ಕಾಮಗಾರಿ ಮುಗಿದಿದೆ. ಅಂದರೆ ಕೇವಲ 44 ದಿನಗಳಲ್ಲಿ ಈ 3ಡಿ ಮುದ್ರಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಕಂಪ್ಯೂಟರ್‌ ನಿಯಂತ್ರಣದೊಂದಿಗೆ ಈ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಕ್ಯಾಡ್ ಮಾಡೆಲ್ ಅಥವಾ ಡಿಜಿಟಲ್ 3ಡಿ ಮಾಡಲ್ ರೂಪಿಸಿ ಕಂಪ್ಯೂಟರ್ ನಿರ್ದೇಶನದಲ್ಲಿ ಕಾಂಕ್ರೀಟ್ ಇತ್ಯಾದಿ ಸಾಮಗ್ರಿಗಳನ್ನು ಸೇರಿಸಿ ಕಟ್ಟಡ ನಿರ್ಮಿಸಲಾಗಿದೆ. ಎಲ್ ಅಂಡ್ ಸಂಸ್ಥೆ ತಮಿಳುನಾಡಿನ ಕಾಂಚಿಪುರಂನಲ್ಲಿ 3ಡಿ ಮುದ್ರಿತ ಕಟ್ಟಡ ನಿರ್ಮಾಣ ಘಟಕ ಹೊಂದಿದೆ. ಪೋಸ್ಟ್‌ ಆಫೀಸ್‌ ಕಟ್ಟಡ ನಿರ್ಮಾಣಕ್ಕೆ ವಿವಿಧ ಭಾಗಗಳನ್ನು ಕಾಂಚಿಪುರಂನಲ್ಲೇ ತಯಾರಿಸಿ, ಅವುಗಳನ್ನು ಬೆಂಗಳೂರಿಗೆ ತಂದು ಅಸೆಂಬಲ್ ಮಾಡಲಾಗಿದೆ.

Share Post