ವರದಕ್ಷಿಣೆಗಾಗಿ ಪತ್ನಿಯನ್ನು ಮಚ್ಚಿನಿಂದ ಕೊಂದ ಪಾಪಿ ಪತಿ
ನೆಲಮಂಗಲ; ವರದಕ್ಷಿಣೆ ತಾರದ ಪತ್ನಿಯನ್ನು ಪತಿಯೇ ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆಲಮಂಗಲ ತಾಲ್ಲೂಕಿನ ಭೂಸಂದ್ರ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಶೃತಿ ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಕೃಷ್ಣಮೂರ್ತಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತರಬನಹಳ್ಳಿ ಗ್ರಾಮದ ಶೃತಿಯನ್ನು ಪತಿ ಕೃಷ್ಣಮೂರ್ತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನೂ ಒಂದೂವರೆ ವರ್ಷದ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು. ಆದ್ರೆ ಪತಿ ಕೃಷ್ಣಮೂರ್ತಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಈ ಕೊಲೆ ಮಾಡಿದ್ದಾನೆ ಎಂದು ಶೃತಿ ಪೋಷಕರು ಆರೋಪಿಸುತ್ತಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.