HIJAB CASE: ಕೋರ್ಟ್ ಆದೇಶದ ನಂತರ ಮುಂದಿನ ತೀರ್ಮಾನ; ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
ಬೆಂಗಳೂರು; ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಮಾನಕ್ಕೆ ಕಾಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಹಿಜಾಬ್ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಬೇಡಿಕೆ ಮತ್ತು ನಂತರದ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಿತು. ಆದ್ರೆ ಪ್ರಕರಣದ ನ್ಯಾಯಾಲಯದಲ್ಲಿದೆ. ಹೀಗಾಗಿ ಕೋರ್ಟ್ ಆದೇಶ ಬರುವವರೆಗೂ ಯಾವುದು ನಿಲುವು ಪ್ರಕಟಿಸದಿರಲು ಸರ್ಕಾರ ನಿರ್ಧರಿಸಿದೆ ಎಂದರು.
ಹಿಜಾಬ್ ಬಗ್ಗೆ ಸಂಪುಟದಲ್ಲಿ ಜಾಸ್ತಿ ಚರ್ಚೆಯಾಗಿಲ್ಲ. 1981ರಿಂದಲೂ ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ಆದೇಶ ಇದೆ. ಹೀಗಿದ್ದರೂ ಈ ಬೆಳವಣಿಗೆ ಏಕೆ ಆಯಿತು. ಯಾರು ಇದರ ಹಿಂದೆ ಇದ್ದಾರೆ. ಗೊತ್ತಿಲ್ಲ. ಸರ್ಕಾರ ರಾಜ್ಯದಲ್ಲಿ ಶಾಂತಿ ಕಾಪಾಡಲು ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಕಾನೂನೂ ಸುವ್ಯವಸ್ಥೆಯನ್ನು ನಾವು ಕಾಪಾಡುತ್ತೇವೆ. ಕೋರ್ಟ್ ಆದೇಶ ಬಂದ ನಂತರ ಸರ್ಕಾರ ಮುಂದಿನ ನಿರ್ಧಾರದ ಬಗ್ಗೆ ಚರ್ಚಿಸುತ್ತೆ ಎಂದು ಮಾಧುಸ್ವಾಮಿ ಹೇಳಿದರು.